ಮಂಡ್ಯ: ಬರೋಬ್ಬರಿ ಒಂದು ದಶಕದ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಜಿಲ್ಲೆಗೆ ರಾಜ್ಯದಲ್ಲೇ 2ನೇ ಸ್ಥಾನ ಬಂದಿದೆ. 2013ರಲ್ಲಿ ಶೇ.88.56ರಷ್ಟು ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನದಲ್ಲಿತ್ತು. ಅಂತೆಯೆ, 2023-24ನೇ ಸಾಲಿನಲ್ಲಿ ಶೇ.96.04ರಷ್ಟು ಫಲಿತಾಂಶದೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ.
ಎಂದಿನಂತೆ ಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿಯೂ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 124 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್‌ಗಳಾಗಿದ್ದಾರೆ. 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 19,965 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇವರಲ್ಲಿ 19,133 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿವಿಧ ಕಾರಣಗಳಿಂದಾಗಿ ಐವರು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಉಳಿದಂತೆ 827 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇದೇ ಮೊದಲ ಬಾರಿಗೆ ಜಿಲ್ಲೆ ಶೇ.95ಕ್ಕಿಂತ ಹೆಚ್ಚು ಫಲಿತಾಂಶ ಪಡೆದಿರುವುದು ವಿಶೇಷ.
2020ರಲ್ಲಿ ಶೇ.89.62ರಷ್ಟು ಫಲಿತಾಂಶದೊಂದಿಗೆ ಮಂಡ್ಯ ಜಿಲ್ಲೆ ರಾಜ್ಯದಲ್ಲೇ 4ನೇ ಸ್ಥಾನದಲ್ಲಿತ್ತು. 2021ರಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ ವಿದ್ಯಾರ್ಥಿಗಳನ್ನು ಕರೊನಾ ಹಿನ್ನೆಲೆಯಲ್ಲಿ ಉತ್ತೀರ್ಣಗೊಳಿಸಿದ ಕಾರಣ ಎಲ್ಲ ಜಿಲ್ಲೆಗಳಂತೆ ಮಂಡ್ಯ ಕೂಡ ‘ಎ’ ಗ್ರೇಡ್ ಪಡೆದಿತ್ತು. ಆದರೆ, ಜಿಲ್ಲಾವಾರು ಕೋಡಿಂಗ್ ಆಧಾರದ ಮೇಲೆ ಮಂಡ್ಯ ಜಿಲ್ಲೆ 11ನೇ ಸ್ಥಾನದಲ್ಲಿತ್ತು. 2021-22ನೇ ಸಾಲಿನಲ್ಲಿ ‘ಎ’ ಗ್ರೇಡ್ ಪಡೆದುಕೊಂಡಿದ್ದ ಜಿಲ್ಲೆಗೆ ಶೇ.94.70ರಷ್ಟು ಫಲಿತಾಂಶ(20,077 ವಿದ್ಯಾರ್ಥಿಗಳಲ್ಲಿ 19,012 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು) ಲಭಿಸಿತ್ತು. ಈ ವರ್ಷ ಫಲಿತಾಂಶ ಇನ್ನಷ್ಟು ಸುಧಾರಣೆ ಕಂಡಿರುವುದು ಜಿಲ್ಲೆಯ ಪ್ರತಿಷ್ಠೆ, ಗೌರವವನ್ನು ಹೆಚ್ಚಿಸಿದಂತಾಗಿದೆ.
2010ರಲ್ಲಿ 10ನೇ ಸ್ಥಾನದಲ್ಲಿದ್ದ ಮಂಡ್ಯ, 2011ರಲ್ಲಿ(ಶೇ.85.53) ರಾಜ್ಯದಲ್ಲೇ ಮೂರನೇ ಸ್ಥಾನಕ್ಕೇರಿತ್ತು. ಮತ್ತೆ 2012ರಲ್ಲಿ(ಶೇ.85.15) 8ನೇ ಸ್ಥಾನಕ್ಕೆ ಕುಸಿದಿತ್ತು. ಆದರೆ 2013ರಲ್ಲಿ ಶೇ.88.56ರಷ್ಟು ಫಲಿತಾಂಶದೊಂದಿಗೆ 2ನೇ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಭೂಪಟದಲ್ಲಿ ಹೊಸ ಹೆಜ್ಜೆಗುರುತು ಮೂಡಿಸುವ ಮೂಲಕ ಜಿಲ್ಲೆಯು ಇಡೀ ರಾಜ್ಯದ ಗಮನಸೆಳೆದಿದೆ.
ಮೂವರು ಟಾಪರ್: 2021-22ನೇ ಸಾಲಿನಲ್ಲಿ ಜಿಲ್ಲೆಯ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದರು. ಅಲ್ಲದೆ 7 ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಅದರಂತೆ ಈ ವರ್ಷವೂ ಜಿಲ್ಲೆಯ 3 ವಿದ್ಯಾರ್ಥಿಗಳು 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಎರಡನೇ ಟಾಪರ್‌ಗಳಾಗಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಆಶೀರ್ವಾದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜೆ.ಮೋಕ್ಷಲಕ್ಷ್ಮೀ, ಮಳವಳ್ಳಿಯ ಜೆ.ಜೆ.ಪಬ್ಲಿಕ್ ಸ್ಕೂಲ್‌ನ ಟಿ.ಆರ್.ಪುಣ್ಯಶ್ರೀ, ಶ್ರೀರಂಗಪಟ್ಟಣದ ನ್ಯೂಆಕ್ಸ್‌ರ್ಡ್ ಪ್ರೌಢಶಾಲೆಯ ಕೆ.ಎಸ್.ಖುಷಿಕ ಆದರ್ಶ ಅವರು 625ಕ್ಕೆ 624 ಅಂಕ ಗಳಿಸಿದ್ದಾರೆ. ಉಳಿದಂತೆ ಇಬ್ಬರು 622, ಒಬ್ಬ ವಿದ್ಯಾರ್ಥಿ 621, ಇಬ್ಬರು 620, ಐವರು 619, ಏಳು ವಿದ್ಯಾರ್ಥಿಗಳು 618 ಅಂಕಗಳನ್ನು ಗಳಿಸಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ತೆಗೆದುಕೊಂಡಿದ್ದ 9731 ಬಾಲಕಿಯರಲ್ಲಿ 9449(ಶೇ.97.10) ಹಾಗೂ 10,234 ಬಾಲಕರಲ್ಲಿ 9684(ಶೇ.94.62) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಶೇಷವೆಂದರೆ ಫಲಿತಾಂಶದಲ್ಲಿ ಮದ್ದೂರು ತಾಲೂಕು ಸತತ 20ನೇ ಬಾರಿಯೂ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಜಿಲ್ಲೆಯ ಶೈಕ್ಷಣಿಕ ಭೂಪಟದಲ್ಲಿ ಮದ್ದೂರು ಅಗ್ರಸ್ಥಾನದಲ್ಲಿದೆ.