ಮಂಡ್ಯ: ಜಿಲ್ಲೆಯಲ್ಲಿ ಆ.2ರಿಂದ ಎಸ್‌ಎಸ್‌ಎಲ್ಸಿ ಪರೀಕ್ಷೆ-3 ನಡೆಯಲಿದೆ. ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಪರಿಣಾಮಕಾರಿಯಾಗಿ ಸಜ್ಜುಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆ- 2ರ ಫಲಿತಾಂಶ ವಿಶ್ಲೇಷಣೆ ಹಾಗೂ ಪರೀಕ್ಷೆ-3ರ ಮಾರ್ಗದರ್ಶನ ಸಂಬಂಧ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2ನೇ ಹಂತದ ಪರೀಕ್ಷೆಗೆ 5,830 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಅದರಲ್ಲಿ 2,092 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.35.88ರಷ್ಟು ಫಲಿತಾಂಶ ಬಂದಿದೆ. ಕೆ.ಆರ್.ಪೇಟೆ ತಾಲೂಕಿಗೆ ಶೇ.39.21, ಮದ್ದೂರಿಗೆ ಶೇ.40.74, ಮಳವಳ್ಳಿಗೆ ಶೇ.38.04, ಮಂಡ್ಯ ಉತ್ತರ ವಲಯಕ್ಕೆ ಶೇ.48.33, ಮಂಡ್ಯ ದಕ್ಷಿಣ ವಲಯಕ್ಕೆ ಶೇ.20.17, ನಾಗಮಂಗಲಕ್ಕೆ ಶೇ.34.69, ಪಾಂಡವಪುರಕ್ಕೆ ಶೇ.24.67, ಶ್ರೀರಂಗಪಟ್ಟಣ ತಾಲೂಕಿಗೆ ಶೇ.33.69ರಷ್ಟು ಫಲಿತಾಂಶ ಬಂದಿದೆ. ಅಂತೆಯೇ 3,738 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, 3ನೇ ಹಂತದ ಪರೀಕ್ಷೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಉತ್ತೀರ್ಣರಾಗಲು ಅಗತ್ಯ ಕ್ರಮ ಕೈಗೊಳ್ಳಿ ಎಂದರು.
2ನೇ ಪರೀಕ್ಷೆಯಲ್ಲಿಯೂ ಉತ್ತಮ ಫಲಿತಾಂಶ ಬಂದಿರುವುದಿಲ್ಲ. ಇದಕ್ಕೆ ಶಿಕ್ಷಕರ ಬೇಜವಾಬ್ದಾರಿತನವೇ ಕಾರಣ. ಆದ್ದರಿಂದ ಈ ಬಾರಿಯು ಕೂಡ ಇದು ಪುನರಾವರ್ತಿತವಾಗದಂತೆ 3ನೇ ಪರೀಕ್ಷೆಗೆ ಮಕ್ಕಳಲ್ಲಿ ಆತ್ಮ ವಿಶ್ವಾಸ ನೀಡಿ ಉನ್ನತ ಮಟ್ಟದಲ್ಲಿ ಫಲಿತಾಂಶ ಬರುವಂತೆ ಮಾಡಬೇಕು. 2ನೇ ಪರೀಕ್ಷೆಗೆ ಗೈರಾದ ಮಕ್ಕಳ ಪಾಲಕರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿ ಮನವೊಲಿಸಿ 3ನೇ ಪರೀಕ್ಷೆಗೆ ಮಕ್ಕಳು ಹಾಜರಾಗುವಂತೆ ತಿಳಿ ಹೇಳಬೇಕು. ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ, ಮುಖ್ಯಾಪಾಧ್ಯರೊಂದಿಗೆ ಸಭೆ ನಡೆಸಿ ಪರೀಕ್ಷೆಯಲ್ಲಿ ಗೈರಾದ ಹಾಗೂ ಕಡಿಮೆ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, 2024-25ನೇ ಸಾಲಿಗೆ ಸಂಬಂಧಿಸಿದಂತೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಯೂನಿಟ್ ಟೆಸ್ಟ್ ಅನ್ನು ಕಡ್ಡಾಯವಾಗಿ ನಡೆಸಬೇಕು. ಈ ವೇಳೆ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಹಾಗೂ ಹೆಚ್ಚಿನ ಆದ್ಯತೆ ನೀಡಿ ಮಂದಿನ ಟೆಸ್ಟ್‌ನಲ್ಲಿ ಉತ್ತೀರ್ಣರಾಗುವಂತೆ ಸಜ್ಜುಗೊಳಿಸಬೇಕು. ಇದರಿಂದ 2025 ರಲ್ಲಿ ನಡೆಯುವ ಪರೀಕ್ಷೆಯಲ್ಲಿ ಜಿಲ್ಲೆಯು ಉತ್ತಮ ಫಲಿತಾಂಶ ಗಳಿಸಬಹುದು ಎಂದರು.
ಸಭೆಯಲ್ಲಿ ಡಿಡಿಪಿಐ ಎಚ್.ಶಿವರಾಮೇಗೌಡ, ಡಯಟ್ ಪ್ರಾಂಶುಪಾಲ ಪುರುಷೋತ್ತಮ, ಬಿಇಒಗಳಾದ ಮಹದೇವ, ಕೆ.ಟಿ.ಸೌಭಾಗ್ಯಾ, ಚಂದ್ರಶೇಖರ್, ಕಾಳೀರಯ್ಯ, ಶಿಕ್ಷಣಾಧಿಕಾರಿ ಚಂದ್ರಕಾಂತಾ ಇತರರಿದ್ದರು.