ಹನೂರು: ಶೈಕ್ಷಣಿಕ ವಲಯದ 9 ಕೇಂದ್ರಗಳಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, 2,104 ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ ಪರೀಕ್ಷೆ ಬರೆದರು.
ಶೈಕ್ಷಣಿಕ ವಲಯದಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 1,085 ಬಾಲಕರು, 1,075 ಬಾಲಕಿಯರು ಸೇರಿ ಒಟ್ಟು 2,160 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಹಾಗಾಗಿ ಹನೂರಿನ ಕ್ರಿಸ್ತರಾಜ ಶಾಲೆ, ಜಿ.ವಿ ಗೌಡ ಪ್ರೌಢಶಾಲೆ, ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಶಾಲೆ, ರಾಮಾಪುರದ ಜೆಎಸ್‌ಎಸ್ ಪ್ರೌಢಶಾಲೆ, ಮಾರ್ಟಳ್ಳಿಯ ಸೇಂಟ್ ಮೇರಿಸ್ ಪ್ರೌಢಶಾಲೆ, ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆ, ಮಣಗಳ್ಳಿಯ ಸರ್ಕಾರಿ ಪ್ರೌಢಶಾಲೆ, ಕೌದಳ್ಳಿಯ ಸಂತ ಅಂತೋಣಿ ಪ್ರೌಢಶಾಲೆ ಹಾಗೂ ಹೂಗ್ಯಂನ ಮುರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪರೀಕ್ಷಾ ಕೇಂದ್ರವಾಗಿ ನಿಗಧಿಪಡಿಸಲಾಗಿತ್ತು. ಶುಕ್ರವಾರ ನಡೆದ ಕನ್ನಡ ಪರೀಕ್ಷೆಯಲ್ಲಿ 1,060 ಬಾಲಕರು, 1,044 ಬಾಲಕಿಯರು ಸೇರಿ ಒಟ್ಟು 2,104 ವಿದ್ಯಾರ್ಥಿಗಳು ಹಾಜರಾಗಿದ್ದು, 56 ವಿದ್ಯಾರ್ಥಿಗಳು ಗೈರಾಗಿದ್ದರು.
ಪರೀಕ್ಷೆ ಸುಸೂತ್ರ: ಪರೀಕ್ಷಾ ಕೇಂದ್ರಗಳಿಗೆ ಕೆಲ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪಾಲಕರೊಂದಿಗೆ ಆಗಮಿಸಿದರೆ, ಬಹುತೇಕ ವಿದ್ಯಾರ್ಥಿಗಳು ಸಹಪಾಠಿಗಳೊಂದಿಗೆ ಗುಂಪಾಗಿ ಲವಲವಿಕೆಯಿಂದ ಆಗಮಿಸಿದ್ದರು. ಕೇಂದ್ರದಲ್ಲಿ ಇರಿಸಲಾಗಿದ್ದ ನೋಂದಣಿ ಸಂಖ್ಯೆ ಫಲಕದ ಸ್ಥಳಕ್ಕೆ ಪ್ರವೇಶ ಪತ್ರದೊಂದಿಗೆ ತೆರಳಿ ಕೊಠಡಿಯನ್ನು ಖಚಿತ ಪಡಿಸಿಕೊಂಡರು. ಈ ವೇಳೆ ಶಿಕ್ಷಕರು ಹಾಗೂ ಪಾಲಕರು ಅಗತ್ಯ ಸಲಹೆ, ಸೂಚನೆಯನ್ನು ನೀಡಿದರು. ಪರೀಕ್ಷೆ ಆರಂಭಕ್ಕೂ ಮುನ್ನಾ ಕೆಲ ವಿದ್ಯಾರ್ಥಿಗಳು ಪೂರ್ವಾಭ್ಯಾಸ ನಡೆಸಿದರು. ಪರೀಕ್ಷಾ ಕೇಂದ್ರಗಳಿಗೆ ಬಿಇಒ ಗುರುಲಿಂಗಯ್ಯ ಹಾಗೂ ಅಧಿಕಾರಿಗಳ ತಂಡ ಮುಂಜಾಗ್ರತಾ ಕ್ರಮವಾಗಿ ಭೇಟಿ ನೀಡಿ ಪರಿಶೀಲಿಸಿತು. ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ನರ್ಸ್‌ಗಳನ್ನು ನಿಯೋಜಿಸಲಾಗಿತ್ತು. ಈ ಮೂಲಕ ಹನೂರಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನೆರವೇರಿತು.