ಜಿಲ್ಲೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 106 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ; ಶಿಕ್ಷಣ ಇಲಾಖೆಯಿಂದ ಸಿದ್ಧತೆ ಆರಂಭ

ಬೆಂಗಳೂರು ಗ್ರಾಮಾಂತರ: ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ದಿನಾಂಕ ಘೋಷಿಸಿದ ಬೆನ್ನಲ್ಲೇ ಗ್ರಾಮಾಂತರ ಜಿಲ್ಲೆಯಲ್ಲಿ ಪರೀಕ್ಷೆ ಆಯೋಜನೆಯ ಸಿದ್ಧತೆಗಳು ಚುರುಕುಗೊಂಡಿವೆ. ಜಿಲ್ಲಾಡಳಿತ ಭವನದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಯಲ್ಲಿ ಜಿಲ್ಲೆಯ ಶಿಕ್ಷಣಾಧಿಕಾರಿಗಳು, ವಿಷಯ ತಜ್ಞರ ಜತೆ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ಗಂಗಮಾರೇ ಗೌಡ ಸೋಮವಾರ ಸಭೆ ನಡೆಸಿದರು.

ಪರೀಕ್ಷೆ ಯನ್ನು ಸವಾಲಾಗಿ ಸ್ವೀಕರಿಸಿರುವ ಇಲಾಖೆ, ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳುತ್ತಿದೆ. ಪರೀಕ್ಷೆಗಳ ಸುಗಮ ಆಯೋಜನೆಗೆ ಅಗತ್ಯ ವ್ಯವಸ್ಥೆ ಮಾಡಿ ಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕರೊನಾ ಸೋಂಕಿನ 3ನೇ ಅಲೆ ಆತಂಕ, ಮಕ್ಕಳ ಆರೋಗ್ಯ ರಕ್ಷಣೆ ಸವಾಲಿನೊಂದಿಗೆ ಪರೀಕ್ಷೆ ನಡೆಸಲು ವಿಷಯ ತಜ್ಞರು, ವೈದ್ಯಕೀಯ ಸಿಬ್ಬಂದಿ ಒಳಗೊಂಡು ಡಿಸಿ ಕೆ.ಶ್ರೀನಿವಾಸ್ ನೇತೃತ್ವದಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸ ಲಾಗಿದೆ. ಜಿಲ್ಲೆಯ 4 ತಾಲೂಕುಗಳ 106 ಕೇಂದ್ರಗಳಲ್ಲಿ ಪರೀಕ್ಷೆ ಆಯೋಜಿಸಲಾಗುತ್ತಿದೆ. ದೇವನಹಳ್ಳಿ ಮತ್ತು ಹೊಸಕೋಟೆ ಯಲ್ಲಿ ತಲಾ 27, ದೊಡ್ಡಬಳ್ಳಾಪುರದಲ್ಲಿ 28 ಮತ್ತು ನೆಲಮಂಗಲದಲ್ಲಿ 24 ಕೇಂದ್ರಗಳನ್ನು ವ್ಯವಸ್ಥೆ ಮಾಡಿ, ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ.

ಜು.3ರಂದು ಪೂರ್ವಸಿದ್ಧತಾ ಪರೀಕ್ಷೆ: ಜಿಲ್ಲೆಯಾದ್ಯಂತ ಆನ್‌ಲೈನ್‌ನಲ್ಲಿ ಪೂರ್ವಸಿದ್ಧತಾ ಪರೀಕ್ಷೆಗೆ ಸಿದ್ಧತೆ ನಡೆದಿದೆ. ವಿಷಯ ತಜ್ಞರ ಮೂಲಕ ಅಂತಿಮ ಪರೀಕ್ಷೆಯ ಮಾದರಿಯಲ್ಲೇ ಬಹುಆಯ್ಕೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ್ಯಪ್ ನೆರವು: ಇಲಾಖೆಯ ವಿಶೇಷ ಆ್ಯಪ್‌ನಲ್ಲಿ ಈಗಾಗಲೇ ಬಹುಆಯ್ಕೆ ಪ್ರಶ್ನೆಗಳುಳ್ಳ ಪ್ರಶ್ನೆಪತ್ರಿಕೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಬೋರ್ಡ್ ಬಿಡುಗಡೆ ಮಾಡಿರುವ ಪ್ರಶ್ನೆಪತ್ರಿಕೆಯೂ ಇದರಲ್ಲಿದೆ. ಅಂತಿಮ ಪರೀಕ್ಷೆ ವೇಳೆಗೆ ವಿದ್ಯಾರ್ಥಿಗಳಿಗೆ ಗೊಂದಲ ಇರುವುದಿಲ್ಲ ಎಂಬುದು ಅಧಿಕಾರಿಗಳ ನಿರೀಕ್ಷೆಯಾಗಿದೆ.

13,989 ವಿದ್ಯಾರ್ಥಿಗಳು : ಜಿಲ್ಲೆಯಲ್ಲಿ ಈ ಬಾರಿ 13,989 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ 650 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ದೇವನಹಳ್ಳಿಯಲ್ಲಿ 3,344, ಹೊಸಕೋಟೆಯಲ್ಲಿ 3,804, ದೊಡ್ಡಬಳ್ಳಾಪುರದಲ್ಲಿ 3,792 ಹಾಗೂ ನೆಲಮಂಗಲದಲ್ಲಿ 3,049 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಸರ್ಕಾರದ ಸೂಚನೆಯಂತೆ ಕರೊನಾ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆಗೆ ವ್ಯವಸ್ಥೆ ಮಾಡಲು ಶಿಕ್ಷಣ ಇಲಾಖೆ ಪೂರ್ವಸಿದ್ಧತೆ ಆರಂಭಿಸಿದೆ. ವಿದ್ಯಾರ್ಥಿಗಳು ಆನ್‌ಲೈನ್ ಟೆಸ್ಟ್‌ಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಅಂತಿಮ ಪರೀಕ್ಷೆಯನ್ನೂ ಸಮರ್ಥವಾಗಿ ಎದುರಿಸುವ ವಿಶ್ವಾಸವಿದೆ. ಗಂಗಮಾರೇಗೌಡ ಡಿಡಿಪಿಐ