ಚಿಕ್ಕಬಳ್ಳಾಪುರ: ಆಲ್ ದಿ ಬೆಸ್ಟ್ ಮೈ ಬಾಯ್, ಯೂ ಐವ್ ಮೇಡ್ ಆ್ಯಸ್ ಪ್ರೌಡ್.
ಇದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಅಂಧ ಬಾಲಕ ತೋರಿದ ಸಾಧನೆಗೆ ಸಂಸದ ಡಾ ಕೆ.ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ ಪರಿ. ಇದನ್ನು ಉದಾಹರಣೆಯಾಗಿಟ್ಟುಕೊಂಡು ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಮನೋಬಲ, ಆತ್ಮವಿಶ್ವಾಸ, ದೃಢವಾದ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಪುನರುಚ್ಚಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದ ಕೌಶಿಕ್ ರೆಡ್ಡಿ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದಾರೆ.
ಕೌಶಿಕ್ ಗೆ ಬಾಲ್ಯದಿಂದಲೇ ದೃಷ್ಟಿದೋಷವಿದ್ದರೂ ಅದನ್ನು ಲೆಕ್ಕಿಸದೆ ಕಷ್ಟಪಟ್ಟು ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 592/625 ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ತೋರಿದ್ದಾನೆ. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಂಸದರು ಕೌಶಿಕ್ ನನ್ನು ಅಭಿನಂದಿಸಿದ್ದಾರೆ. ಅವನ ತಂದೆಯೊಂದಿಗೆ ಬಂದು ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡಾಗ ಒಂದು ಕ್ಷಣ ಕಣ್ಣಿನಲ್ಲಿ ನೀರು ತುಂಬಿಕೊಂಡು ಬಂದರೂ ಮರುಕ್ಷಣ ಹೆಮ್ಮೆಯಾಯಿತು, ತುಂಬಾ ಸಂತೋಷವಾಯಿತು ಎಂಬುದಾಗಿಯೂ ಭಾವುಕರಾಗಿದ್ದಾರೆ.
ಮನಸ್ಸಿನ ಸಂಕಲ್ಪದ ಮುಂದೆ ದೇಹದ ಯಾವ ನ್ಯೂನತೆಯೂ ದೊಡ್ಡದಲ್ಲ ಎನ್ನುವುದಕ್ಕೆ ಕೌಶಿಕ್ ಮತ್ತು ಅವನ ಪೋಷಕರ ಛಲವೇ ಎಲ್ಲರಿಗೂ ಮಾದರಿ. ಅಭಿನಂದನೆಗಳು ಕೌಶಿಕ್, ನಿನ್ನ ಭವಿಷ್ಯ ಉಜ್ವಲವಾಗಲಿ, ನಿನ್ನ ಹೆತ್ತವರಿಗೆ, ಹುಟ್ಟೂರಿಗೆ ಇನ್ನಷ್ಟು ಒಳ್ಳೆಯ ಹೆಸರು ತರಲು ದೇವರು ನಿನಗೆ ಶಕ್ತಿ ಕೊಡಲಿ ಎಂದು ಆಶೀರ್ವಾದಿಸಿದ್ದಾರೆ.
ಕೌಶಿಕ್ ನ ಮುಂದಿನ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿಯೂ ಎಂದು ಸಂಸದ ಡಾ ಕೆ.ಸುಧಾಕರ್ ಮಾತು ಕೊಟ್ಟಿದ್ದಾರೆ.