ಎಸ್ಸೆಸ್ಸೆಲ್ಸಿ ಪರೀಕ್ಷೆ3ರ ಪೂರ್ವಸಿದ್ಧತಾ ಸಭೆ ಸೋಮವಾರ ಕೊಪ್ಪಳದಲ್ಲಿ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಜರುಗಿತು. ಡಿಡಿಪಿಐ ಶ್ರೀಶೈಲ ಬಿರಾದಾರ, ಪರೀಕ್ಷಾ ನೋಡಲ್​ ಅಧಿಕಾರಿ ಶರಣಬಸವಗೌಡ, ಬಿಇಒಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿದ್ದರು. 
ಜಿಲ್ಲೆ

ಅಕ್ರಮಕ್ಕೆ ಅವಕಾಶವಿಲ್ಲದಂತೆ ಪರೀಕ್ಷೆ ನಡೆಸಿ, ಎಡಿಸಿ ಸಿದ್ರಾಮೇಶ್ವರ ಸೂಚನೆ

Kopala - Raveendra V K

ಕೊಪ್ಪಳ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ 3 ಆಗಸ್ಟ್​ 2ರಿಂದ ನಡೆಯಲಿದ್ದು, ಅಕ್ರಮಗಳಿಗೆ ಅವಕಾಶವಿಲ್ಲದಂತೆ ಪರೀೆ ನಡೆಸಿ ಎಂದು ಎಡಿಸಿ ಸಿದ್ರಾಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಅಂಗವಾಗಿ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತದಳ, ಮಾರ್ಗಾಧಿಕಾರಿಗಳು, ವೀಕ್ಷಕರು ಹಾಗೂ ಇತರ ನಿಯೋಜಿತ ಸಿಬ್ಬಂದಿ ನಿಮ್ಮ ಕರ್ತವ್ಯ ಜವಾಬ್ದಾರಿಯಿಂದ ನಿಭಾಯಿಸಿ. ನಿಗದಿತ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿರಿ. ಎಲ್ಲ ಸಿದ್ಧತೆ ಮುಂಚಿತವಾಗಿ ಮಾಡಿಕೊಳ್ಳಿ. ನಾಮಿನಲ್​ ರೋಲ್​ನಲ್ಲಿರುವಂತೆ ಪರೀಕ್ಷಾ ಕೇಂದ್ರದಲ್ಲಿ ಆಸನ ವ್ಯವಸ್ಥೆ ಮಾಡಿ. ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿ. ಅಕ್ರಮಕ್ಕೆ ಅವಕಾಶವಿಲ್ಲದಂತೆ ಅಚ್ಚುಕಟ್ಟಾಗಿ ನಡೆಸಿ ಎಂದು ನಿರ್ದೇಶಿಸಿದರು.

ಪರೀಕ್ಷೆ ಕೇಂದ್ರ ಸುತ್ತ ನಿಷೇಧಾಜ್ಞೆ ಜಾರಿ ಇರಲಿದೆ. ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್​ ವಸ್ತುಗಳನ್ನು ತರುವಂತಿಲ್ಲ. ಕೇಂದ್ರದ ಮುಖ್ಯ ಅಧೀಕ್ಷಕರು ಎಚ್ಚರಿಕೆಯಿಂದ ತಪಾಸಣೆ ನಡೆಸಿ. ನಿಯಮಾವಳಿ ಬಗ್ಗೆ ಅಭ್ಯರ್ಥಿಗಳಿಗೆ ಸೂಕ್ತ ತಿಳಿವಳಿಕೆ ನೀಡಿ. ಕಡ್ಡಾಯವಾಗಿ ಶುದ್ಧ ಕುಡಿವ ನೀರು, ಶೌಚಗೃಹ, ಆಸನ ವ್ಯವಸ್ಥೆ ಇರಲಿ. ತುರ್ತು ಆರೋಗ್ಯ ಪರಿಸ್ಥಿತಿ ನಿಭಾಯಿಸಲು ವೈದ್ಯಕಿಯ ಸಿಬ್ಬಂದಿ ನಿಯೋಜಿಸಿ. ಪೊಲೀಸರು ಅಗತ್ಯ ಬಂದೋಬಸ್ತ್​ ಕೈಗೊಳ್ಳುವಂತೆ ಸೂಚಿಸಿದರು.

ಡಿಡಿಪಿಐ ಶ್ರೀಶೈಲ ಬಿರಾದಾರ ಮಾತನಾಡಿ, ಆ.2ರಿಂದ 9ವರೆಗೆ 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಯಲಬುರ್ಗಾ ತಾಲೂಕಿನ 662, ಕುಷ್ಟಗಿ 720, ಕೊಪ್ಪಳ 863 ಹಾಗೂ ಗಂಗಾವತಿ ತಾಲೂಕಿನಲ್ಲಿ 1,204 ಒಟ್ಟು 3,449 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷಾ ಮಂಡಳಿಯ ಮಾರ್ಗಸೂಚಿಯಂತೆ ಸುಗಮ ಪರೀಕ್ಷೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪರೀಕ್ಷಾ ನೋಡಲ್​ ಅಧಿಕಾರಿ ಶರಣಬಸವಗೌಡ, ಬಿಇಒಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಮಾರ್ಗಾಧಿಕಾರಿಗಳು, ಪರೀಕ್ಷಾ ನಿಯೋಜಿತ ಸಿಬ್ಬಂದಿ, ಖಜಾನೆ ಅಧಿಕಾರಿಗಳಿದ್ದರು.