ಜಿಲ್ಲೆ

ಜಿಲ್ಲೆಯಲ್ಲಿ ಮೊದಲ ದಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ : 220 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ; ಎಲ್ಲೆಡೆ ಕರೊನಾ ಮಾರ್ಗಸೂಚಿ ಪಾಲನೆ

Tumakuru

ತುಮಕೂರು : ಕರೊನಾ ಆತಂಕದ ನಡುವೆಯೂ ಸಾಕಷ್ಟು ಮುಂಜಾಗ್ರತೆ ನಡುವೆ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಒಟ್ಟು 220 ಪರೀಕ್ಷಾ ಕೇಂದ್ರಗಳಲ್ಲಿ ಮೊದಲನೇ ದಿನವಾದ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು.

ಪರೀಕ್ಷಾ ಕೇಂದ್ರದ ಬಳಿ ಬೆಳಗ್ಗೆ 8ರಿಂದ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಹಾಜರಾಗಿದ್ದರು. 8.30ಕ್ಕೆ ಪರೀಕ್ಷಾ ಕೇಂದ್ರಗಳ ಆವರಣ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಯಿತು.

ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆ, ಸಿದ್ಧಗಂಗಾ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ ಸೇರಿ ಜಿಲ್ಲೆಯ 220 ಪರೀಕ್ಷಾ ಕೇಂದ್ರಗಳಲ್ಲೂ ಪೋಷಕರೊಂದಿಗೆ ಮಕ್ಕಳು ಬಂದು ಧೈರ್ಯದಿಂದಲೇ ಪರೀಕ್ಷೆ ಬರೆದರು.

ಪರೀಕ್ಷಾ ಕೊಠಡಿಗಳಲ್ಲಿ ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿ ಕುಳಿತು ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಗಿತ್ತು, ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯಗಳವನ್ನು ಒದಗಿಸಲಾಗಿತ್ತು. ಎಲ್ಲೂ ತೊಂದರೆ ಕಾಣಿಸಲಿಲ್ಲ. ತುಮಕೂರಿನ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಕೊರಟಗೆರೆ ತಾಲೂಕಿನಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿಷೇಧಾಜ್ಞೆ ಮುಂದುವರಿಕೆ : ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜು.22ರಂದು ಕೂಡ ಮುಂದುವರಿದಿದೆ. ಗುರುವಾರ ಸಂಜೆ 5ರವರೆಗೂ ಜಾರಿಯಲ್ಲಿರಲಿದ್ದು, ಈ ಸಮಯದಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತ ಯಾವುದೇ ಜೆರಾಕ್ಸ್ ಅಂಗಡಿ ಮತ್ತು ಸ್ಟೇಷನರಿ ಅಂಗಡಿಗಳು ಬಾಗಿಲು ತೆರೆಯುವಂತಿಲ್ಲ. ಜಿಲ್ಲೆಯ 220 ಪರೀಕ್ಷಾ ಕೇಂದ್ರಗಳಲ್ಲೂ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಜವಾಬ್ದಾರಿಯಿಂದ ನಡೆದುಕೊಂಡ ಪಾಲಕರು: ಗಣಿತ, ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯಗಳಿಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಜಿಲ್ಲೆಯ ಎಲ್ಲ್ಲ ಕೇಂದ್ರಗಳಲ್ಲಿಯೂ ಸುವ್ಯವಸ್ಥಿತವಾಗಿ ಪರೀಕ್ಷೆ ನಡೆದಿವೆ. ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳು ಹಾಗೂ ಪಾಲಕರು ಅಷ್ಟೇ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದು, ಅವರಿಗೆ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಜು.22ರಂದು ನಡೆಯಲಿರುವ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಜತೆಗಿದ್ದರು.

ಮೊದಲ ದಿನ 146 ವಿದ್ಯಾರ್ಥಿಗಳು ಗೈರು : ಜಿಲ್ಲೆಯಲ್ಲಿ 146 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು, ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 68, ಮಧುಗಿರಿಯಲ್ಲಿ 78 ಒಟ್ಟು 146 ವಿದ್ಯಾರ್ಥಿಗಳು ಮೊದಲ ದಿನ ಪರೀಕ್ಷೆಗೆ ಗೈರಾಗಿದ್ದರು. ಮಧುಗಿರಿಯ ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ಕರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ತುಮಕೂರು ಜಿಲ್ಲೆಯಲ್ಲಿ 3200, ಮಧುಗಿರಿ ಜಿಲ್ಲೆಯಲ್ಲಿ 1293 ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 22246 ಹಾಗೂ ಮಧುಗಿರಿಯಲ್ಲಿ 12845 ಒಟ್ಟು 35091 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. 34945 ವಿದ್ಯಾರ್ಥಿಗಳು ಮೊದಲ ದಿನ ಪರೀಕ್ಷೆ ಬರೆದರು.