ತುಮಕೂರು : ಎರಡು ದಿನಗಳ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ಮುಕ್ತಾಯಗೊಂಡಿದೆ.
ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಗುರುವಾರ ನಡೆದ ಭಾಷಾ ಪರೀಕ್ಷೆಯಲ್ಲಿ 34,246 ವಿದ್ಯಾರ್ಥಿಗಳು ಹಾಜರಾದರು.
ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 21,729 ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 12,641 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು ತುಮಕೂರು ವ್ಯಾಪ್ತಿಯಲ್ಲಿ 21,672 ಮಕ್ಕಳು ಪರೀಕ್ಷೆ ಬರೆದರು. 57 ವಿದ್ಯಾರ್ಥಿಗಳು ಗೈರಾಗಿದ್ದರು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 67 ವಿದ್ಯಾರ್ಥಿಗಳು ಪರೀಕ್ಷೆ ತಪ್ಪಿಸಿಕೊಂಡರೆ 12,574 ಮಕ್ಕಳು ಪರೀಕ್ಷೆ ಬರೆದರು. ಒಟ್ಟಾರೆ 124 ವಿದ್ಯಾರ್ಥಿಗಳು ಗೈರಾದರು.
ಜು.19ರಂದು ಮೂರು ಕೋರ್ ವಿಷಯಗಳ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಗುರುವಾರ ಮೂರು ಭಾಷಾ ಪರೀಕ್ಷೆಗಳನ್ನು ಬರೆದರು. ಎರಡು ಶೈಕ್ಷಣಿಕ ಜಿಲ್ಲೆಯಲ್ಲಿ ಎಲ್ಲಿಯೂ ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಸಂಪನ್ನಗೊಂಡಿತು.
ಕಟ್ಟುನಿಟ್ಟಿನ ಮಾರ್ಗಸೂಚಿ: ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 220 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಕೋವಿಡ್ ಮಾರ್ಗಸೂಚಿ ಅನ್ವಯ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ, ಪ್ರತಿ ವಿದ್ಯಾರ್ಥಿಯನ್ನು ತಪಾಸಣೆಗೆ ಒಳಪಡಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಹಾಜರಾಗುವಂತೆ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಇಲಾಖಾಧಿಕಾರಿಗಳು ಪೋಷಕರನ್ನು ಸಂಪರ್ಕಿಸಿ ಗರಿಷ್ಠ ಹಾಜರಾತಿಗೆ ಕ್ರಮ ವಹಿಸಿದ್ದರು.
ವಿದ್ಯಾರ್ಥಿಗಳ ಮನವೊಲಿಕೆ : ಗುಬ್ಬಿ ತಾಲೂಕಿನಲ್ಲಿ ಜು.19ರಂದು ಪರೀಕ್ಷೆಗೆ ಗೈರು ಹಾಜರಾಗಿದ್ದ ನಾಗಸಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಲ್ಮಾನ್ ಹಾಗೂ ಕಡಬಾ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಹರ್ಷವರ್ಧನ್‌ನನ್ನು ಗುರುವಾರ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆಯುವಂತೆ ಮನವೊಲಿಸುವಲ್ಲಿ ಶಿಕ್ಷಣ ಇಲಾಖೆ ಹಾಗೂ ತಾಲೂಕು ಆಡಳಿತ ಯಶಸ್ವಿಯಾಯಿತು.
ಆಸ್ಪತ್ರೆಯಿಂದ ಪರೀಕ್ಷೆ ಕೇಂದ್ರಕ್ಕೆ....! : ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಸರ್ಕಾರಿ ಪ್ರೌಢಶಾಲೆಯ ಬಸವರಾಜು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಕಾತ್ರಿಕೆಹಾಳ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು.
ಜುಲೈ 19 ಹಾಗೂ 22ರಂದು 130 ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲಾಗಿದೆ. ಜಿಲ್ಲೆಯಲ್ಲಿ 21729 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಈ ಪೈಕಿ 21672 ವಿದ್ಯಾರ್ಥಿಗಳು ಹಾಜರಾಗಿದ್ದು, 57 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಖಾಸಗಿಯಾಗಿ 326 ಮತ್ತು 1469 ಪುನಾರವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸಿ.ನಂಜಯ್ಯ ಡಿಡಿಪಿಐ, ತುಮಕೂರು ಶೈಕ್ಷಣಿಕ ಜಿಲ್ಲೆ