ಹುಬ್ಬಳ್ಳಿ: ರಾಮಜನ್ಮಭೂಮಿ ಹೋರಾಟ ಸಂದರ್ಭದಲ್ಲಿ ನಗರದಲ್ಲಿ ಉಂಟಾಗಿದ್ದ 31 ವರ್ಷಗಳ ಹಿಂದಿನ ಗಲಭೆ ಪ್ರಕರಣವನ್ನು ಮತ್ತೆ ಕೆದಕುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ. ಇದರ ವಿರುದ್ಧ ನಗರದಲ್ಲಿ ಜ. 3ರಂದು ಬೆಳಗ್ಗೆ 10.30ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ, ಎಸ್ಎಸ್ಕೆ ಸಮಾಜದ ಹಿರಿಯರಾದ ಅಶೋಕ ಕಾಟವೆ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಸಂಭ್ರಮ ಕಳೆಗಟ್ಟಿದ್ದರೆ, ಇನ್ನೊಂದೆಡೆ ರಾಮಭಕ್ತ ಹೋರಾಟಗಾರರನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಹಿಂದುಗಳಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
ಎಸ್ಎಸ್ ಕೆ ಸಮಾಜದ ದೊಡ್ಡ ಸಂಖ್ಯೆಯ ಜನರು ಹಿಂದುತ್ವದ ಪರ ಇದ್ದಾರೆ. ಇಂತಹ ಸಮಾಜದ ವ್ಯಕ್ತಿ ರಾಮಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಶ್ರೀಕಾಂತ ಪೂಜಾರಿ ಎಂಬುವವರನ್ನು ಬಂಧಿಸಲಾಗಿದೆ. ನ್ಯಾಯಾಲಯದ ಆದೇಶದ ನೆಪ ಮಾಡಿಕೊಂಡು ಮೂರು ದಶಕದ ಹಿಂದಿನ ಕೇಸ್ ಈಗ ಮತ್ತೆ ಮುನ್ನೆಲೆಗೆ ತಂದಿದ್ದು ಏಕೆ? ಹಿಂದುಗಳನ್ನು ಬಂಧಿಸುವ ಮೂಲಕ ಸಮಾಜದ ಬಲ ಕುಗ್ಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಟಿದ್ದಾರೆ. ಅವರ ಪ್ರಯತ್ನಕ್ಕೆ ಜಯ ಸಿಗುವುದಿಲ್ಲ ಎಂದು ಹೇಳಿದರು.
ಹಳೇ ಕೇಸ್ ಗಳ ಹೆಸರಲ್ಲಿ ಸಮಾಜದ ಮೇಲೆ ದೌರ್ಜನ್ಯ ನಡೆಸಿದರೆ ನಾವು ಸಹಿಸುವುದಿಲ್ಲ. ಸರ್ಕಾರದ ತಪು$್ಪ ನಿರ್ಣಯಗಳಿಂದಾಗಿ ಇಂತಹ ಟನೆಗಳು ನಡೆಯುತ್ತಿವೆ. ಕೂಡಲೇ ಸರ್ಕಾರ ರಾಮಭಕ್ತರ ಜಾಮೀನಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಹಿಂದು ಕಾರ್ಯಕರ್ತರಾದ ಶ್ರೀಕಾಂತ ಅವರ ಮನೆಗೆ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಧೈರ್ಯ ತುಂಬಲಿದ್ದೇವೆ. ಸಮಾಜದ ವತಿಯಿಂದ ಅವರಿಗೆ ಅಗತ್ಯ ನೆರವು, ಸಹಾಯ ಮಾಡಲಿದ್ದೇವೆ ಎಂದು ಕಾಟವೆ ಉತ್ತರಿಸಿದರು.
ಮಾಜಿ ಮೇಯರ್ ಡಿ.ಕೆ. ಚವ್ಹಾಣ, ರಾಜು ಜರತಾರರ, ಇತರರು ಗೋಷ್ಠಿಯಲ್ಲಿದ್ದರು.