ಗಜೇಂದ್ರಗಡ: ಪಟ್ಟಣದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್‌ಎಸ್‌ಕೆ) ಸಮಾಜದ ಪಂಚ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಬುಧವಾರ ಸಹಸ್ರಾರ್ಜುನ ಮಹಾರಾಜರ ಜಯಂತಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದ ಮೆರವಣಿಗೆ ವಿವಿಧ ಮಾರ್ಗಗಳಲ್ಲಿ ಸಾಗಿತು. ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಘೋಷಣೆಗಳನ್ನು ಕೂಡಗಿದರು.
ಎಸ್‌ಎಸ್‌ಕೆ ಸಮಾಜದ ಪಂಚ ಕಮಿಟಿ ಅಧ್ಯಕ್ಷ ರವೀಂದ್ರ ಶಿಂಗ್ರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಹಿಂದೆ ವ್ಯಾಪಾರವನ್ನೇ ನಂಬಿ ಬದುಕು ನಡೆಸುತ್ತಿದ್ದ ನಮ್ಮ ಸಮಾಜದವರು ಈಗ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಸಮಾಜದವರು ಪ್ರತಿಭಾವಂತರಾಗಿ ಮೆರೆಯುತ್ತಿದ್ದಾರೆ. ಇದೇ ರೀತಿ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರೆ ಸಮಾಜಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಬಹುದು. ವಿದ್ಯಾವಂತರಾದವರು ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.
ಕಮಿಟಿಯ ಮಾಜಿ ಅಧ್ಯಕ್ಷ ವಿಶ್ವನಾಥಸಾ ಮೇಘರಾಜ ಮಾತನಾಡಿ, ಸಹಸ್ರಾರ್ಜುನ ಮಹಾರಾಜರ ವಂಶಸ್ಥರಾದ ನಾವೆಲ್ಲ ಭಾಗ್ಯವಂತರು. ಯಾವುದೇ ಕಾರ್ಯಕ್ರಮ ಮಾಡಿದರೂ ಅದನ್ನು ಶಿಸ್ತಿನಿಂದ ಮತ್ತು ರಾಜವೈಭವದಿಂದ ಮಾಡುವುದು ನಮಗೆ ರೂಢಿಗತ. ನಡೆ-ನುಡಿ, ರೀತಿ-ನೀತಿಯಲ್ಲೂ ನಮ್ಮ ಸಮಾಜದವರು ಒಂದು ಹೆಜ್ಜೆ ಮುಂದಿರುವುದು ಹೆಮ್ಮೆಯ ವಿಷಯ. ಸಹಸ್ರಾರ್ಜುನ ಮಹಾರಾಜರ ಜಯಂತಿ ಹೆಸರಿನಲ್ಲಿ ಸಮಾಜದ ಎಲ್ಲರನ್ನೂ ಒಂದೆಡೆ ಸೇರಿಸುವುದು ಒಳ್ಳೆಯ ಕೆಲಸ ಎಂದು ಬಣ್ಣಿಸಿದರು.
ಬೆಳಗ್ಗೆ ಜಯಂತ್ಯುತ್ಸವ ಅಂಗವಾಗಿ ಸಮಾಜದ ಮಹಿಳೆಯರು ಹಾಗೂ ಪುರುಷರಿಂದ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ಕೊಲ್ಹಾಪುರದ ಬ್ಯಾಂಜ್ಯೋ ಹಾಗೂ ವಿವಿಧ ವಾದ್ಯ ಮೇಳಗಳು ಗಮನ ಸೆಳೆದವು. ಮಹಿಳೆಯರು ಆರತಿ ತಟ್ಟೆ ಹಿಡಿದು ಹೆಜ್ಜೆ ಹಾಕಿದರು. ಪಟ್ಟಣದ ಜಗದಂಬಾ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ಕೊಳ್ಳಿಯವರ ಕ್ರಾಸ್, ಬಸವೇಶ್ವರ ವೃತ್ತ, ದುರ್ಗಾ ವೃತ್ತ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತ ತಲುಪಿ ಮರಳಿ ಹಿರೇಬಜಾರ, ಕಟ್ಟಿಬಸವೇಶ್ವರ ನಗರದ ಮೂಲಕ ಮತ್ತೆ ಜಗದಂಬಾ ದೇವಸ್ಥಾನಕ್ಕೆ ತಲುಪಿತು. ನಂತರ ಜರುಗಿದ ಸಂಗೀತ ಸಂಜೆ ಕಾರ್ಯಕ್ರಮ ಮನಸಿಗೆ ಮುದ ನೀಡಿತು. ಸಮಾಜದ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನಿಸಲಾಯಿತು
ಭಾಸ್ಕರಸಾ ಶಿಂಗ್ರಿ, ಬಾಲಚಂದ್ರಸಾ ರಾಯಬಾಗಿ, ಸುರೇಂದ್ರಸಾ ಖೋಡೆ, ಲಕ್ಷಣಸಾ ರಂಗ್ರೇಜಿ, ಗಣೇಶ ರಾಯಬಾಗಿ, ಸುಭಾಸ ರಾಯಬಾಗಿ, ನಾಗೇಶ ಶಿಂಗ್ರಿ, ರಾಘವೇಂದ್ರ ರಾಯಬಾಗಿ, ಶ್ರೀೀಧರ ಕಾಟವಾ, ಸರಸ್ವತಿಬಾಯಿ ಶಿಂಗ್ರಿ, ಶಾರದಾಬಾಯಿ ರಾಯಬಾಗಿ, ಸವಿತಾ ರಾಯಬಾಗಿ, ಆರ್.ಎಂ. ರಾಯಬಾಗಿ, ರಮೇಶ ಬದಿ, ಲಕ್ಷ್ಮಣಸಾ ಶಿಂಗ್ರಿ, ರಾಘು ರಾಯಬಾಗಿ, ಗಿರೀಶ ಪವಾರ, ದತ್ತೂಸಾ ಬಾಕಳೆ, ತುಳಜು ಶಿಂಗ್ರಿ, ರಾಜು ಮಿಸ್ಕಿನ, ಸುರೇಶ ರಂಗ್ರೇಜಿ, ಉಮೇಶ ರಾಯಬಾಗಿ, ರಾಜು ಮಿಸ್ಕಿನ, ಡಾ. ಸುನೀಲ ದಾನಿ, ವಿನಾಯಕ ಜರತಾರಿ ಇತರರು ಪಾಲ್ಗೊಂಡಿದ್ದರು.