ಜಿಲ್ಲೆ

ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧ

ಎ. ಆರ್. ರಘುರಾಮ
  • ಶನಿವಾರಸಂತೆ: ಸಮಾಜದ ಮರು ನಿರ್ಮಾಣಕ್ಕೆ 12ನೇ ಶತಮಾನದಲ್ಲಿನ ಶರಣರು ನೀಡಿದ ಕೊಡುಗೆ ಅಪಾರವಾದದ್ದು ಎಂದು ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
    ಕೊಡ್ಲಿಪೇಟೆ ಡಾ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸುತ್ತೂರು ಮಠದ ಗುರು ಪಂಚಾಕ್ಷರ ಶಿವಾಚಾರ್ಯರ ದತ್ತಿ ನಿಧಿ ವಿಚಾರ ಗೋಷ್ಠಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
    ಬಸವೇಶ್ವರರು ಅಂದೇ ಅನುಭವ ಮಂಟಪವನ್ನು ಸ್ಥಾಪಿಸಿ ಎಲ್ಲ ಜಾತಿ ಹಾಗೂ ಧರ್ಮಗಳ ಜನರನ್ನು ಪುರಸ್ಕರಿಸಿ ಸಮಾನತೆ ಸಾರಿದರು. ಎಲ್ಲರನ್ನೂ ಶರಣರು ಎಂದರು. ಇಂದು ಎಳವೆಯಲ್ಲೇ ಮಕ್ಕಳಿಗೆ ನಾವು ಸಂಸ್ಕಾರ ಹಾಗೂ ಶರಣರ ವಿಚಾರಧಾರೆಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಆ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜವನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
    ದಿವ್ಯ ಔಷಧವಾಗಿದೆ: ದತ್ತಿ ಉಪನ್ಯಾಸ ನೀಡಿದ ಕೊಡಗು ವಿವಿ ಕನ್ನಡ ಉಪನ್ಯಾಸಕ ಡಾ.ಜಮೀರ್ ಆಹಮ್ಮದ್, ಸಾಮಾಜಿಕ ಹಾಗೂ ಸಾಂಸ್ಕೃತಿಕ ತಲ್ಲಣಗಳಿಗೆ ವಚನ ಸಾಹಿತ್ಯ ದಿವ್ಯ ಔಷಧವಾಗಿದೆ ಎಂದರು.
    ನಾಡಿನ ಸಂಸ್ಕೃತಿಗಳ ಅಧ:ಪತನಕ್ಕೆ ಅನಕ್ಷರಸ್ಥರಿಗಿಂತ ಅಕ್ಷರಸ್ಥರ ಬೇಜವಬ್ದಾರಿ ವರ್ತನೆಯೇ ಕಾರಣ. ಸಮಾಜದಲ್ಲಿಂದು ಘಟಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ 12ನೇ ಶತಮಾನದ ವಚನಕಾರರು ನೀಡಿದ ಸಾಮಾಜಿಕ ಸಂದೇಶಗಳೇ ಇಂದಿಗೂ ಪರಿಹಾರವಾಗಿದೆ ಎಂದರು.