ಜಿಲ್ಲೆ

ಅಂತರಜಿಲ್ಲಾ ಸಂಪರ್ಕ ಕಲ್ಪಿಸುವ ಶನಿವಾರಸಂತೆ ಬ್ರಿಡ್ಜ್

ಎ. ಆರ್. ರಘುರಾಮ

ಶನಿವಾರಸಂತೆ : ಕೊಡಗು ಜಿಲ್ಲೆಯಿಂದ ನೆರೆ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶನಿವಾರಸಂತೆ ಹೊಳೆಗೆ ಅಡ್ಡಲಾಗಿ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ಚಾಲನೆಗೊಂಡಿದ್ದು, ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ. ಶನಿವಾರಸಂತೆ ಸಮಿಪದ ಗೌಡಳ್ಳಿ ಗ್ರಾ.ಪಂ.ಗೆ ಸೇರಿದ ರಾಮನಹಳ್ಳಿ ಬಳಿ ಹರಿಯುವ ಹೊಳೆಯನ್ನು ಶನಿವಾರಸಂತೆ ಹೊಳೆ ಎಂದೇ ಕರೆಯುತ್ತಾರೆ. ರಾಮನಹಳ್ಳಿ ಗ್ರಾಮದಿಂದ ಹೊಳೆಯ ಆಚೆ ಬದಿ ದಾಟಿದರೆ ಹುಣಸಳ್ಳಿ ಚಿನ್ನಳ್ಳಿ ಗ್ರಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆಗೆ ಸಂಪರ್ಕವಾಗುತ್ತದೆ. ಜಿಲ್ಲೆಯ ಗಡಿಭಾಗದಲ್ಲಿರುವ ಹಾಸನ ಜಿಲ್ಲೆಗೆ ಒಳಪಡುವ ಈಚಲಬೀಡು, ಕಳಲೆ ಹಾಗೂ ಹೊಸೂರು ಗ್ರಾಮಕ್ಕೆ ಸಾಗಲು ಇದು ಪ್ರಮುಖ ಮಾರ್ಗವಾಗಿದ್ದು, ಅಂತರಜಿಲ್ಲಾ ಸಂಪರ್ಕದ ಕೊಂಡಿಯಾಗಿದೆ.
ರಾಮನಹಳ್ಳಿ ಗ್ರಾಮದಲ್ಲಿ ಹರಿಯುವ ಶನಿವಾರಸಂತೆ ಹೊಳೆಗೆ ಸೇತುವೆ ಸಂಪರ್ಕ ಇರಲಿಲ್ಲ. ಹಲವು ವರ್ಷಗಳಿಂದ ಗ್ರಾಮಸ್ಥರು ಹೊಳೆಗೆ ಅಡ್ಡಲಾಗಿ ಮರದ ದಿಮ್ಮಿ, ಮತ್ತು ಮರದ ಹಲಿಗೆಗಳನ್ನು ಅಳವಡಿಸಿಕೊಂಡು ತಾವೇ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದರು. ಹೊಳೆಯ ಎರಡೂ ಬದಿಗಳಲ್ಲಿರುವ ಗ್ರಾಮಸ್ಥರು ವಾಹನಗಳನ್ನು ಆಚೆಯೇ ಬಿಟ್ಟು ಮರದ ಸೇತುವೆಯ ಮೂಲಕ ನಡೆದು ಬಂದು ಪಕ್ಕದ ಊರುಗಳಿಗೆ ಹೋಗುತ್ತಿದ್ದರು.ಮರದ ಹಲಗೆ ಮೇಲೆ ಸಾಹಸದ ನಡಿಗೆ ಸಂದರ್ಭ ಸಲ್ಪ ಜಾರಿದರೂ ದೊಡ್ಡ ಅನಾಹುತ ವಾಗುವ ಸಾಧ್ಯತೆ ಹೆಚ್ಚಿತ್ತು. ಈ ಬಗ್ಗೆ ವಿಜಯವಾಣಿ 2023ರ ಜುಲೈ 28ರಂದು ವರದಿ ಪ್ರಕಟವಾಗಿತ್ತು. ಇದರ ಪರಿಣಾಮವಾಗಿ ಮಡಿಕೇರಿ ಶಾಸಕರ 10 ಲಕ್ಷ ರೂ ಅನುದಾನ ಬಿಡುಗಡೆಯಾಗಿ ಕೆಲಸ ನಡೆಯುತ್ತಿದೆ. ಸೇತುವೆ ಕೆಲಸ ಪೂರ್ಣವಾದರೆ ಜನತೆಗೆ ಒಟ್ಟು 7 ಕಿ.ಮೀ.ದೂರ ಸುತ್ತಿ ಬಳಸಿ ಬರುವ ಸಮಯದ ಉಳಿತಾಯವಾದಂತಾಗುತ್ತದೆ. ರೈತರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.