ತುಮಕೂರು: ಪ್ರತಿಕ್ಷಣ ಹೊಸತನ್ನು ಕಾಣುವುದೇ ವಿಜ್ಞಾನ. ವಿಜ್ಞಾನ ವಿದ್ಯಾರ್ಥಿಗಳು ಪಾದರಸದಂತಿರಬೇಕು ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ನಗರದ ವಿವಿಯ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಮಂಗಳವಾರ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ವತಿಯಿಂದ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಸೃಜನ-2023 ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲೇ ದೊಡ್ಡ ಕನಸುಗಳನ್ನು ಕಾಣಬೇಕು. ಅದನ್ನು ಭವಿಷ್ಯದಲ್ಲಿ ಸಾಧಿಸಲೇಬೇಕೆಂಬ ಹಠ, ಛಲವಿರಬೇಕು. ಆಗ ಮಾತ್ರ ಬದುಕಿನಲ್ಲಿ ಗೆಲುವು ಖಚಿತ ಎಂದರು.
ತಂತ್ರಜ್ಞಾನದ ಇತಿಹಾಸ ಹಾಗೂ ಪ್ರಸ್ತುತ ಮಾಹಿತಿಯನ್ನು ವಿಜ್ಞಾನ ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕು. ಹೊಸ ಅವಿಷ್ಕಾರ, ಸಂಶೋಧನೆಗಳನ್ನು ಕಾಣುವುದೇ ವಿಜ್ಞಾನ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೊಸತನಗಳಿಗೆ ತೆರೆದುಕೊಳ್ಳಬೇಕು ಎಂದು ಸಲಹೆನೀಡಿದರು.
ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಪೋಷಕರನ್ನು ಮೊದಲು ಗೌರವಿಸಿ. ನಮ್ಮ ಬದುಕು ಬೆಳಗುತ್ತಿದ್ದರೆ ಅದಕ್ಕೆ ಕಾರಣ ನಮ್ಮ ತಂದೆ ತಾಯಿ. ಅವರ ಶ್ರಮದಿಂದ ನಾವಿಂದು ಸುಖವಾಗಿದ್ದೇವೆ. ಶ್ರಮಕ್ಕೆ ಪ್ರತಿಫಲ ಎಂದಿಗೂ ಸಿಗುತ್ತದೆ. ನಿಮ್ಮ ಗುರಿ ಗುರು ಸ್ಪಷ್ಟವಿರಲಿ ಎಂದರು.
ನಮ್ಮಲ್ಲಿರುವ ವಿದ್ಯೆ, ಬುದ್ಧಿಯನ್ನು ಯಾವ ಕೃತಕ ಬುದ್ಧಿಮತ್ತೆಯು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಂತಿಕೆ ಇದ್ದಷ್ಟು ನಾವು ಎಲ್ಲದಕ್ಕೂ ತಂತ್ರಜ್ಞಾನದ ಮೊರೆ ಹೋಗುವುದನ್ನು ಕಡಿಮೆ ಮಾಡುತ್ತೇವೆ. ಹೊರ ಜಗತ್ತಿನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಂವಹನ, ವಿಶೇಷ ಕೌಶಲ್ಯ ಹಾಗೂ ನಮ್ಮ ಹಾವಭಾವ ಮುಖ್ಯ ಎಂದು ರಂಗಕರ್ಮಿ ಚಿಂತನ್ ವಿಕಾಸ್ ತಿಳಿಸಿದರು.
ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ. ಶೇಠ್, ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ್ ಉಪಸ್ಥಿತರಿದ್ದರು.
ವಿವಿಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕದ ಸಂಯೋಜಕ ಡಾ. ಜಿ.ರಾಮಕೃಷ್ಣ ಜಿ. ವಿಜ್ಞಾನ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಸ್ವಾಗತಿಸಿದರು. ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ. ಕೆ.ಎನ್.ಚೇತನ್ ಪ್ರತಾಪ್ ನಿರೂಪಿಸಿದರು.