ಜಿಲ್ಲೆ

14ಕ್ಕೆ ಶ್ರೀಯೋಗಿ ನಾರೇಯಣ ಪಲ್ಲಕಿ ಉತ್ಸವ

ಕೋಲಾರ; ನಗರದಲ್ಲಿ ಮಾ.14ರಂದು ಶ್ರೀಯೋಗಿ ನಾರೇಯಣ ಯತೀಂದ್ರರ 299ನೇ ಜಯಂತಿ ಆಚರಿಸಲಾಗುವುದು ಎಂದು ಸಮುದಾಯದ ಮುಖಂಡ ವೆಂಕಟಸ್ವಾಮಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಯೋಗಿ ನಾರೇಯಣ ಯುವ ಬಲಿಜ ಸೇವಾ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9.30ಕ್ಕೆ ತಾತಯ್ಯ ವೃತ್ತದಲ್ಲಿ ಪೂಜೆ ಸಲ್ಲಿಸಿ ನಂತರ ಪಲ್ಲಕಿಗಳ ಮೆರವಣಿಗೆ ನಡೆಯಲಿದೆ, ಸಮುದಾಯದ ಮುಖಂಡರು, ಕೈವಾರ ತಾತಯ್ಯನವರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು. ವಿವಿಧ ಹಳ್ಳಿಗಳಿಂದ 70 ಪಲ್ಲಕ್ಕಿಗಳು, ಸ್ತಬ್ಧಚಿತ್ರಗಳು ಬರಲಿವೆ. ಬೆಳಗ್ಗೆ 10ಗಂಟೆಗೆ ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ. ನಂತರ ರಂಗಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮುದಾಯದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ನೌಕರರ ಸಂಘದ ಅಧ್ಯಕ್ಷ ಆರ್​.ಪ್ರಸಾದ್​ ಮಾತನಾಡಿ, ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿಯಲ್ಲಿ 2023-24ನೇ ಸಾಲಿನಲ್ಲಿ ಶೇ.80ಕ್ಕೂ ಅಧಿಕ ಅಂಕ ಪಡೆದ ಸುಮಾರು 150 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ, ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪುಷ್ಠಿ ನಾರಾಯಣಸ್ವಾಮಿ, ವೆಂಕಟಕೃಷ್ಣಯ್ಯ, ರಘು, ಕೆ.ವಿ.ಸುರೇಶ್​, ಚಲತಿ, ಅರುಣಮ್ಮ, ರೌತ್​ ಶಂಕರಪ್ಪ ಇದ್ದರು.