oplus_34 
ಜಿಲ್ಲೆ

ವೇದಾಂತ ಸಾಮ್ರಾಜ್ಯಕ್ಕೆ ಶ್ರೀವ್ಯಾಸತೀರ್ಥರ ಕೊಡುಗೆ ಅಪಾರ

ಮೈಸೂರು: ವೇದಾಂತ ಸಾಮ್ರಾಜ್ಯಕ್ಕೆ ಶ್ರೀವ್ಯಾಸತೀರ್ಥರ ಕೊಡುಗೆ ಅಪಾರ ಎಂದು ಯುವ ವಿದ್ವಾಂಸ ಆಯಾಚಿತ ಶ್ರೀಶ ಹೊನ್ನಾಳಿ ಹೇಳಿದರು.

ದೀಪಾವಳಿ ಪಾಡ್ಯದ ಅಂಗವಾಗಿ ನಗರದ ಕೃಷ್ಣಮೂರ್ತಿಪುರಂನ ಸೋಸಲೆ ಶ್ರೀವ್ಯಾಸತೀರ್ಥ ವಿದ್ಯಾಪೀಠದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾನ ಪೂಜೆ, ಮೂಲ ವಿಗ್ರಹಗಳಿಗೆ ಶಂಖಾಭಿಷೇಕ, ಗೋಪೂಜೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಆಚಾರ್ಯ ಶ್ರೀಮಧ್ವರ ಪರಂಪರೆಯಲ್ಲಿ ವ್ಯಾಸತೀರ್ಥರು ತಮ್ಮ ಸಾಧನೆ ಮತ್ತು ಕೃತಿ ರಚನೆಗಳಿಂದ ಸನ್ಯಾಸ ಪೀಠದಲ್ಲಿ ರಾಜರಾಗಿಯೇ ಮೆರೆದರು. ವ್ಯಾಸತ್ರಯಗಳಾದಿಯಾಗಿ ಅವರ ಮಹತ್ತರ ಗ್ರಂಥಗಳು ಇಂದಿಗೂ ಮಾಧ್ವ ಪರಂಪರೆ ಮತ್ತು ವೇದಾಂತ ಅಧ್ಯಯನ ರಂಗದಲ್ಲಿ ಮಾರ್ಗದರ್ಶಿಯಾಗಿವೆ ಎಂದು ಅವರು ತಿಳಿಸಿದರು.

ಯುವ ಪಂಡಿತ ಪ್ರಣವ ಆಚಾರ್ಯ, ಹಿರಿಯ ವಿದ್ವಾಂಸ ಶೇಷಗಿರಿ ಆಚಾರ್ಯ ಇದೇ ಸಂದರ್ಭ ಉಪನ್ಯಾಸ ನೀಡಿದರು.

ಮಠದ ಪೀಠಾಧಿಪತಿ ಶ್ರೀವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಅಭಿಷೇಕ ಮತ್ತು ಪೂಜೆ ನೆರವೇರಿಸಿದರು. ಈ ಸಂದರ್ಭ ಮೂಲ ಪ್ರತಿಮೆ ಶ್ರೀಗೋಪಾಲಕೃಷ್ಣ ದೇವರಿಗೆ ವಜ್ರಖಚಿತ ಆಭರಣ ಸಮರ್ಪಣೆ ಮಾಡಿದರು. ಗೋಗ್ರಾಸ ಸಮರ್ಪಣೆ, ಸಂಜೆ ತುಳಸೀ ಸಂಕೀರ್ತನೆ ಪೂಜೆ ಇತ್ಯಾದಿಗಳು ನೆರವೇರಿದವು. ನೂರಾರು ಭಕ್ತರು ಮಹಾ ಪ್ರಸಾದ ಸ್ವೀಕರಿಸಿ, ಗುರುಗಳಿಂದ ಮಂತ್ರಾಕ್ಷತೆ ಅನುಗ್ರಹ ಪಡೆದರು.

ಸೋಸಲೆ ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ.ಮಧುಸೂದನಾಚಾರ್ಯ, ಮಠದ ಪ್ರಮುಖರಾದ ಡಿ.ಪಿ. ಅನಂತಾಚಾರ್ಯ, ಗುರುಗಳ ಆಪ್ತ ಕಾರ್ಯದರ್ಶಿ ಅಭಿಜಿತ್ ರಾವ್, ವಿದ್ಯಾಪೀಠದ ಪ್ರಾಚಾರ್ಯ ಡಾ.ಶ್ರೀನಿಧಿ ಆಚಾರ್ಯ ಪ್ಯಾಟಿ, ಹಿರಿಯ ವಿದ್ವಾಂಸ ಸಿ.ಎಚ್.ಶ್ರೀನಿವಾಸಮೂರ್ತಿ ಸೇರಿದಂತೆ ಹಲವು ಪಂಡಿತರು, ಉಪನ್ಯಾಸಕರು ಹಾಜರಿದ್ದರು.