ಬೆಂಗಳೂರು: ಪ್ರಾಚೀನ ಭಾಷೆಯಾದ ಸಂಸ್ಕೃತವು ಎಂದಿಗೂ ಮೃತವಾಗುವುದಿಲ್ಲ; ಅದು ಅಮೃತ ಭಾಷೆ. ಸಂಸ್ಕೃತವಿಲ್ಲದ ಜಗತ್ತು ಶೂನ್ಯ ಎಂದು ಶ್ರೀ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.
ನಗರದ ಆಚಾರ್ಯ ಪಾಠಶಾಲೆಯ ಸಭಾಂಗಣದಲ್ಲಿ ಸಮ್ಯಕ್ ಪ್ರತಿಷ್ಠಾನ ಆಯೋಜಿಸಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಂಸ್ಕಾರ ಮತ್ತು ಸಂಸ್ಕೃತಿ ಬದುಕಿಗೆ ಬಹಳ ಮುಖ್ಯ. ಅವುಗಳನ್ನು ನೀಡುವುದಕ್ಕೆ ಸಂಸ್ಕೃತ ಅತ್ಯವಶ್ಯಕ. ಮಕ್ಕಳಿಗೆ ಮುಂದಿನ ಭವಿಷ್ಯವನ್ನು ಸೃಷ್ಟಿಸಲು ಸಂಸ್ಕೃತ ಅಗತ್ಯ ಎಂದು ಶ್ರೀಗಳು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶ್ರೀಸತ್ಯ ಸಾಯಿ ಲೋಕಸೇವಾ ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಬಿ.ಸತ್ಯನಾರಾಯಣ ಮಾತನಾಡಿ, ಅಂಕ ಗಳಿಸುವುದೇ ವಿದ್ಯಾರ್ಥಿಗಳ ಪ್ರಮುಖ ಗುರಿಯಾಗಬಾರದು. ಅಂಕಗಳೊಂದಿಗೆ, ಉತ್ತಮ ಚಾರಿತ್ರ್ಯ ರೂಢಿಸಿಕೊಳ್ಳುವುದರ ಕಡೆಗೂ ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಓಡಿಸಾದ ಲೋಕ ಭಾಷಾ ಪ್ರಚಾರ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಸದಾನಂದ ದಿಕ್ಷೀತ್ ರವರಿಗೆ ಸಂಸ್ಕೃತ ಸೇವಾವ್ರತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಾಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಶಾಸನ ಸಮಿತಿ ಸದಸ್ಯರಾದ ಬಸಪ್ಪ ಡೊಂಕುಬಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಕೃತ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸುಮಾರು 400 ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.