ಮೈಸೂರು: ತಾಲೂಕಿನ ಮಾಕನಹುಂಡಿಯ ಶ್ರೀಶನೈಶ್ಚರಸ್ವಾಮಿ 57ನೇ ವರ್ಷದ ಆರಾಧನಾ ಮಹೋತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.
ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಹೋಮ-ಹವನದೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಮಧ್ಯಾಹ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಸಾಗಿ ಮೆರವಣಿಗೆಗೆ ಮೆರುಗು ನೀಡಿದವು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಚಿಕ್ಕೇಗೌಡನಹುಂಡಿ, ಹೊಸಹುಂಡಿ, ಹಡಜನ, ಮಾರಶೆಟ್ಟಹಳ್ಳಿ, ಜಂತಗಳ್ಳಿ, ರಾಯನಹುಂಡಿ, ಕಡಕೊಳ, ದಡದಹಳ್ಳಿ, ಮಂಡಕಳ್ಳಿ, ಹಳ್ಳಿದಿಡ್ಡಿ, ಬೀರೇಗೌಡನಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗುಡ್ಡಪ್ಪ ರವಿಕುಮಾರ್ ದೇವರ ಕಾರ್ಯಗಳನ್ನು ನಡೆಸಿಕೊಟ್ಟರು. ಪುಟ್ಟಸ್ವಾಮಿ ಅವರ ಸಹೋದರರಾದ ರವಿ ರಾಮು ಹಾಗೂ ಗ್ರಾಮಸ್ಥರು ಸಾಥ್ ನೀಡಿದರು.
ಸಂಜೆ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ನಡೆಸಿ, ಬಾಣ ಬಿರುಸುನೊಂದಿಗೆ ಪಟಾಕಿಗಳನ್ನು ಸಿಡಿಸಲಾಯಿತು. ರಾತ್ರಿ ಹರಿಕಥೆ ಕಾರ್ಯಕ್ರಮ ನಡೆಯಿತು.