ಬೆಂಗಳೂರು: ಜಗತ್ತಿನ ಎಲ್ಲ ಗುರುಗಳಿಗೆ ಆದಿಗುರು ಸಾಕ್ಷಾತ್ ಶಿವನೇ ಆಗಿದ್ದು, ಅಂತಹ ಶಿವ ಗುರುವಿನ ರೂಪದಲ್ಲಿ ಧರೆಗಿಳಿದು ಬಂದ ದಿನವೇ ಗುರು ಪೂರ್ಣಿಮೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ತಿಳಿಸಿದ್ದಾರೆ.
ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜಗತ್ತಿನಲ್ಲಿರುವ ಎಲ್ಲ ಜ್ಞಾನ ಸಂಪತ್ತಿಗೆ ಪರಮೇಶ್ವರನೇ ಅಧಿಪತಿಯಾಗಿದ್ದು, ಪರಮಾತ್ಮ ಶಸ್ತ್ರದಿಂದ ಎಷ್ಟೇ ದುಷ್ಟರನ್ನು ಸಂಹರಿಸಿದರೂ ದುಷ್ಟರು ಮತ್ತೆ ಮತ್ತೆ ಹುಟ್ಟುತ್ತಿದ್ದರು. ಇದಕ್ಕಾಗಿ ಶಸವನ್ನು ತ್ಯಾಗ ಮಾಡಿ ದುಷ್ಟರ ಮನೋವಿಕಾಸದ ಮೂಲಕ ದುಷ್ಟತನವನ್ನು ನಾಶ ಮಾಡುವುದಕ್ಕಾಗಿ ಶಾಸ್ತ್ರವನ್ನು ಕೈಯಲ್ಲಿ ಹಿಡಿದು ಗುರುವಿನ ರೂಪದಲ್ಲಿ ಅವತರಿಸಿ ಬರುತ್ತಾನೆ. ಹಾಗೆ ಶಿವನವತರಿಸಿ ಬಂದ ಪವಿತ್ರ ದಿನವೇ ಗುರುಪೂರ್ಣಿಮೆ. ಶಿವನು ನೀಡಿದ ವೇದಾಗಮದ ಸಾರವನ್ನು ವಿಭಾಗಿಸಿ ಕೊಟ್ಟ ವ್ಯಾಸ ಮಹರ್ಷಿಗಳ ಹೆಸರಿನಲ್ಲಿ ವ್ಯಾಸ ಪೂರ್ಣಿಮೆ ಎಂಬುದಾಗಿಯೂ ಆಚರಿಸಲಾಗುತ್ತದೆ ಎಂದು ಶ್ರೀಶೈಲ ಜಗದ್ಗುರುಗಳು ವಿವರಿಸಿದರು.
ಸಮಾರಂಭದಲ್ಲಿ ಆಂಧ್ರಪ್ರದೇಶದ ನಾಗರಕರ್ನೂಲಿನ ವೇದ ಪಂಡಿತ ವಿಶ್ವನಾಥ ಶಾಸಿಗಳಿಗೆ ‘ವೇದ ಭಾಸ್ಕರ’ ಮತ್ತು ಕಲಬುರಗಿಯ ಶಿವರುದ್ರ ಗವಾಯಿಗಳಿಗೆ ‘ನಾದ ಭಾಸ್ಕರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದ ನಂತರ ಗುರುಪೂರ್ಣಿಮೆ ನಿಮಿತ್ತ ಶ್ರೀಶೈಲ ಜಗದ್ಗುರುಗಳ ಪಾದಪೂಜೆ ನೆರವೇರಿತು. ಇದಕ್ಕೂ ಮುನ್ನ ರಾಜಾಜಿನಗರದ ಪ್ರವೇಶದ್ವಾರದಲ್ಲಿರುವ ಶ್ರೀರೇಣುಕಾಚಾರ್ಯರ ಪ್ರತಿಮೆ ಹಾಗೂ ಸಿದ್ಧಗಂಗೆ ಶ್ರೀಶಿವಕುಮಾರಸ್ವಾಮಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿಭೂತಿಪುರ, ಶಿವಗಂಗೆ, ಅಕ್ಕಿಆಲೂರು, ಅಂಬಿಕಾನಗರ ಮತ್ತು ಕರಿಭಂಟನಾಳ ಮಠದ ಶ್ರೀಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ದಂಪತಿಗಳು, ಕೆವಿವಿಎಸ್ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಅಭಾವೀಮ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಗುರುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ವ್ಯಾಸರು ಬರೆದಿರುವ ಬ್ರಹ್ಮಸೂತ್ರಗಳಿಗೆ ಶಕ್ತಿವಿಶಿಷ್ಟಾದ್ವೆತ ಸಿದ್ಧಾಂತದ ಪರವಾಗಿ ವ್ಯಾಖ್ಯಾನ ಬರೆಯುವ ಮೂಲಕ ವೀರಶೈವ ಸಿದ್ಧಾಂತಕ್ಕೆ ವಿದ್ವಜ್ಜನ ಮನ್ನಣೆ ತಂದು ಕೊಟ್ಟಿರುವ 10-11ನೇ ಶತಮಾನದ ಶ್ರೀಪತಿ ಪಂಡಿತಾರಾಧ್ಯ ಮಹಾಸ್ವಾಮಿಗಳು ವೀರಶೈವರ ಪಾಲಿಗೆ ಪೂಜ್ಯರು. ಶ್ರೀಶೈಲ ಪೀಠದ ಜಗದ್ಗುರುಗಳಾಗಿದ್ದ ಅವರು ಬರೆದಿರುವ ‘ಶ್ರೀಕರ ಭಾಷ್ಯ’ ಸಂಸ್ಕೃತ ಗ್ರಂಥವು ವೀರಶೈವ ಸಾಹಿತ್ಯಕ್ಕೆ ಬಹುದೊಡ್ಡ ಆಕರವಾಗಿದ್ದು, ಗುರುಪೂರ್ಣಿಮೆಯಂದು ಎಲ್ಲರೂ ಅವರನ್ನು ಸ್ಮರಿಸಬೇಕೆಂದು ಶ್ರೀಶೈಲ ಜಗದ್ಗುರುಗಳು ಕರೆ ನೀಡಿದರು.