ಬಾಂಗ್ಲಾ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಕೋಲಾರದ ಬಸ್​ ನಿಲ್ದಾಣ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು. ಮಾಜಿ ಸಂಸದ ಎಸ್​.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್​, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್​, ಬಿಜೆಪಿ ನಗರಾಧ್ಯಕ್ಷ ಅನಿಲ್​ಕುಮಾರ್​ ಇದ್ದರು.  
ಜಿಲ್ಲೆ

ಬಾಂಗ್ಲಾದೇಶದ ಹಿಂದುಗಳಿಗೆ ಭಾರತದ ಶ್ರೀರಕ್ಷೆ

ಬಾಂಗ್ಲಾ ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಕೋಲಾರದ ಬಸ್​ ನಿಲ್ದಾಣ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು. ಮಾಜಿ ಸಂಸದ ಎಸ್​.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್​, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್​, ಬಿಜೆಪಿ ನಗರಾಧ್ಯಕ್ಷ ಅನಿಲ್​ಕುಮಾರ್​ ಇದ್ದರು.

ಮಾಜಿ ಸಂಸದ ಎಸ್​.ಮುನಿಸ್ವಾಮಿ ಹೇಳಿಕೆ - ಕೋಲಾರ, ಮುಳಬಾಗಿಲಿನಲ್ಲಿ ಮಾನವ ಸರಪಳಿ ನಿರ್ಮಿಸಿ ಧರಣಿ


ಕೋಲಾರ
: ಯಾವುದೇ ದೇಶದಲ್ಲಿ ಹಿಂದುಗಳಿಗೆ ತೊಂದರೆ ಕೊಟ್ಟರೆ ಭಾರತ ಸುಮ್ಮನಿರುವುದಿಲ್ಲ. ಅದಕ್ಕಾಗಿ ವಿಶ್ವಸಂಸ್ಥೆಯಲ್ಲಿ ದೇಶದ ಪ್ರಧಾನಮಂತ್ರಿ, ಬಾಂಗ್ಲಾ ದೇಶದ ಪ್ರಧಾನಮಂತ್ರಿಗೆ ಎಚ್ಚರಿಕೆ ಕೊಟ್ಟು, ಅಲ್ಲಿರುವ ಹಿಂದುಗಳಿಗೆ ತೊಂದರೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಮಾಜಿ ಸಂಸದ ಎಸ್​.ಮುನಿಸ್ವಾಮಿ ಹೇಳಿದರು.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ವಿಶ್ವ ಹಿಂದು ಪರಿಷತ್​, ಆರ್​ಎಸ್​ಎಸ್​ ಮತ್ತು ಬಿಜೆಪಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಬಾಂಗ್ಲಾದಲ್ಲಿರುವ ಹಿಂದುಗಳ ಪರ ನಾವಿದ್ದೇವೆ. ಅಲ್ಲಿಂದ ಭಾರತಕ್ಕೆ ಬರುವ ಹಿಂದುಗಳಿಗೆ ಗಡಿಯಲ್ಲಿರುವವರು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನೀವು ಇರುವ ಜಾಗದಲ್ಲೇ ಹೋರಾಟ ಮಾಡಿ, ಈ ದೇಶದ ಪ್ರಧಾನಮಂತ್ರಿಯಾದಿಯಾಗಿ ಭಾರತದ ಪ್ರತಿಯೊಬ್ಬರೂ ಹಿಂದುಗಳ ಬೆಂಬಲಕ್ಕೆ ಇರುತ್ತೇವೆ ಎಂದರು.
ಕಾಂಗ್ರೆಸ್​ನವರು ಚುನಾವಣೆಯಲ್ಲಿ ಗೆಲ್ಲಲು ಕೆಲ ಸಮುದಾಯಗಳನ್ನು ಬಳಸಿಕೊಂಡು ಮತ ಹಾಕಿಸಿಕೊಂಡಿದ್ದಾರೆ. ಒಂದು ಸಮುದಾಯಕ್ಕೆ ಅನ್ಯಾಯವಾದರೆ ಬೀದಿಯಲ್ಲಿ ಹೋರಾಟ ಮಾಡುವ ಆ ಪಕ್ಷದ ನಾಯಕರು, ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು. ಬಾಂಗ್ಲಾದೇಶದವರು ನಮ್ಮ ದೇಶಕ್ಕೆ ಬಂದರೆ ಅವರನ್ನು ಅಣ್ಣ&ತಮ್ಮಂದಿರಂತೆ ನೋಡಿದ್ದೇವೆ. ಆದರೆ, ನಮ್ಮ ದೇಶದವರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್​, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್​, ಬಿಜೆಪಿ ನಗರಾಧ್ಯಕ್ಷ ಅನಿಲ್​ಕುಮಾರ್​, ಬಜರಂಗದಳ ಸದಸ್ಯರಾದ ಬಾಬು, ಬಾಲಾಜಿ, ಅಪ್ಪಿ, ಬಿಜೆಪಿ ಮುಖಂಡರಾದ ಇ.ಶಿವಣ್ಣ, ನಾರಾಯಣಸ್ವಾಮಿ, ಪ್ರವಿಣ್​ಗೌಡ, ಸತ್ಯನಾರಾಯಣ, ಲಕ್ಷ್ಮಣ್ ಗೌಡ ಇದ್ದರು.

ವಕ್ಫ್​ಬೋರ್ಡ್​ ಆಸ್ತಿಗಳು ಸರ್ಕಾರದ ವಶಕ್ಕೆ
ಜಿಲ್ಲೆಯಲ್ಲಿರುವ ಎಷ್ಟೋ ದೇವಸ್ಥಾನ ಜಮೀನು, ಶಾಲಾ&ಕಾಲೇಜುಗಳ ಆಸ್ತಿಗಳನ್ನು ವಕ್ಫ್​ಬೋರ್ಡಿಗೆ ಸೇರಿಸಲಾಗಿದೆ. ಈ ಬಗ್ಗೆ ಹೋರಾಟ ನಡೆಸಿದ್ದೇವೆ. ಒಂದು ಸಮುದಾಯದ ಜಿಲ್ಲಾಧಿಕಾರಿಗಳು ಕೋಲಾರಕ್ಕೆ ಬಂದ ಬಳಿಕ ಆಸ್ತಿಗಳನ್ನು ವಕ್ಫ ಬೋರ್ಡಿಗೆ ಸೇರಿಸುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಂಸದ ಆರೋಪಿಸಿದರು. ಬಹುಸಂಖ್ಯಾತರಾಗಿರುವ ಹಿಂದುಗಳು, ಮುಸ್ಲಿಂ ಸಮುದಾಯದ ವಿರೋಧಿಗಳಲ್ಲ. ಎಲ್ಲ ಕಮ್ಯೂನಿಟಿಗಳಿಗೂ ಭೂಮಿ ಮಂಜೂರು ಮಾಡಬೇಕು. ಆದರೆ ನೀವು ದೇಶದ ಎಲ್ಲ ಸಮುದಾಯದವರು ಮೆಚ್ಚುವ ಅಧಿಕಾರಿಗಳಂತೆ ವರ್ತಿಸಿಲ್ಲ ಎಂದರು.