ಜಿಲ್ಲೆ

ಶ್ರೀರಂಗಪಟ್ಟಣ ಕಾಂಗ್ರೆಸ್‌ನಲ್ಲಿ ಕಲಹ: ಮತ್ತೆ ಶುರುವಾಯ್ತು ಮೂಲ ವರ್ಸಸ್ ವಲಸಿಗ

reportermys

ಮಂಡ್ಯ: ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲಿ ಶ್ರೀರಂಗಪಟ್ಟಣ ಕಾಂಗ್ರೆಸ್‌ನಲ್ಲಿ ಕಲಹ ಶುರುವಾಗಿದೆ. ಜತೆಗೆ ಅಭ್ಯರ್ಥಿ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವುದರ ನಡುವೆ ಮತ್ತೆ ಮೂಲ ವರ್ಸಸ್ ವಲಸಿಗೆ ಎನ್ನುವ ಆಂತರಿಕ ಸಂಘರ್ಷ ಭುಗಿಲೆದ್ದಿದೆ.

ಮಾ.12ರಂದು ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯಲಿದೆ. ಆದರೆ ಇದಕ್ಕೂ ಮೊದಲೇ ಪಕ್ಷದ ಹಿರಿಯ ಮುಖಂಡ ಪಾಲಹಳ್ಳಿ ಚಂದ್ರಶೇಖರ್ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ತಿರುಗಿಬಿದ್ದಿದ್ದಾರೆ. ಮಾತ್ರವಲ್ಲದೆ ಬಿ ಫಾರ್ಮ್ ವಿಚಾರದಲ್ಲಿ ಸ್ಥಳೀಯ ಹಾಗೂ ರಾಜ್ಯ ನಾಯಕರ ಧೋರಣೆಗೆ ಪಕ್ಷ ಹಾಳಾಗುತ್ತಿದೆ ಎಂದು ಬಹಿರಂಗವಾಗಿ ಹರಿಹಾಯ್ದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ಕಾಂಗ್ರೆಸ್‌ನಲ್ಲಿ ಮೂರು ದಶಕದಿಂದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿದಾಗಲೂ ಸಮಾಧಾನ ಹಾಗೂ ನಾಯಕರಿಂದ ಒತ್ತಡ ಹಾಕಿಸುತ್ತಿದ್ದಾರೆ. ಆದರೆ ಈ ಬಾರಿ ಯಾವುದೇ ಒತ್ತಡ ಹಾಗೂ ಒತ್ತಾಯಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಹಲವು ವರ್ಷ ಪಕ್ಷ ಕಟ್ಟಿದವರನ್ನು ಕಡೆಗಣಿಸಿ ಜೆಡಿಎಸ್‌ನಿಂದ ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಪ್ರತಿಯೊಂದು ವಿಚಾರದಲ್ಲಿಯೂ ಮೂಲ ಮುಖಂಡರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಎನ್.ಚಲುವರಾಯಸ್ವಾಮಿ ಅವರು ಯಾರು?. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಅವರ ಕೊಡುಗೆ ಶೂನ್ಯ ಎಂದು ತಿರುಗೇಟು ನೀಡಿದರು.

ಪಕ್ಷದಿಂದ ಇನ್ನೂ ಯಾರನ್ನೂ ಅಭ್ಯರ್ಥಿ ಎಂದು ಘೋಷಣೆ ಮಾಡಿಲ್ಲ. ಆದರೆ ಅದಾಗಲೇ ರಮೇಶ ಬಂಡಿಸಿದ್ದೇಗೌಡ ನಾನೇ ಅಭ್ಯಥಿ ಎಂದು ಎಲ್ಲಡೆ ಪ್ರಚಾರ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಜೆಡಿಎಸ್‌ನಲ್ಲಿ ಯಾವುದೇ ಗೊಂದಲವಿರಲಿಲ್ಲ. ಕಾಂಗ್ರೆಸ್‌ಗೆ ಬಂದು ತಪ್ಪು ಮಾಡಿದೆ. ಆದ್ದರಿಂದ ಈ ಬಾರಿ ನನ್ನನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ.  ಅವರು ಪಕ್ಷಕ್ಕೆ ಬಂದಾಗಿನಿಂದಲೂ ಹಿರಿಯರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಪ್ರಜಾಧ್ವನಿ ವಿಚಾರದಲ್ಲಿಯೂ ನಮ್ಮೊಂದಿಗೆ ಚರ್ಚೆ ನಡೆಸಿಲ್ಲ. ಈ ಬಗ್ಗೆ ಹೇಳಿದರೆ ಜಿಲ್ಲಾ ಕಾಂಗ್ರೆಸ್‌ನಿಂದ ಸಮಿತಿಯಿಂದ ಉಡಾಫೆ ಉತ್ತರ ನೀಡಲಾಗುತ್ತಿದೆ. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಹೊಸಮುಖ ಬರಬೇಕು ಎಂಬ ಕೂಗು ಕೇಳಿ ಬರುತ್ತಿದೆ. ರಾಜ್ಯಸಭೆಯಲ್ಲಿ ಮತ ಹಾಕಿದ್ದ ಮಾತ್ರಕ್ಕೆ ಅವರನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಪರಿಣಾಮ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ನೆಲಕಚ್ಚಿತು. ಎಲ್ಲಿಂದಲೋ ಬಂದು ಪಕ್ಷ ಹಾಳು ಮಾಡಲು ನಿಂತಿರುವ ಇವರ ಮಾತಿಗೆ ಏಕೆ ಬೆಲೆಕೊಡಬೇಕು. ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಜಿಲ್ಲೆಯಲ್ಲಿಯೂ ಕೇಳಿ ಬರುತ್ತಿದೆ. ಒಕ್ಕಲಿಗರೆಲ್ಲರ ತೀರ್ಮಾನವೂ ಸಹ ಇದೇ ಆಗಿದೆ. ಆದ್ದರಿಂದ ರಾಜ್ಯನಾಯಕರು ಯೋಚಿಸಬೇಕಿದೆ ಎಂದರು.

ಮುಖಂಡ ಮರಳಗಾಲ ವಿಜಯಕುಮಾರ್ ಮಾತನಾಡಿ, ಪ್ರಜಾಧ್ವನಿ ಯಾತ್ರೆಯನ್ನು ಅರಕೆರೆ ಹೋಬಳಿಗಷ್ಟೇ ಸೀಮಿತಗೊಳಿಸಲಾಗಿದೆ. ಹಾಗಾದರೆ ಬೇರೆ ಹೋಬಳಿ ಅವಶ್ಯಕತೆ ಇಲ್ಲವೇ?. ರಮೇಶ ಬಂಡಿಸಿದ್ದೇಗೌಡ ತನಗೆ ಜೈಕಾರ ಹಾಕಿಸಿಕೊಳ್ಳಲು ಅರಕೆರೆಗೆ ಕರೆದುಕೊಂಡು ಹೋಗುತ್ತಿರಬಹುದು. ಆದ್ದರಿಂದ ಕೂಡಲೇ ನಾಯಕರು ಯಾತ್ರೆಯ ಮಾರ್ಗವನ್ನು ಬದಲಿಸಬೇಕು. ಇಲ್ಲದಿದ್ದರೆ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಲ್ಲೇನಹಳ್ಳಿ ಸಿದ್ದಲಿಂಗೇಗೌಡ, ನಗುವನಹಳ್ಳಿ ಬಾಲಕೃಷ್ಣ, ದರಸಗುಪ್ಪೆ ಗೋಪಾಲ್, ಕಾರಸವಾಡಿ ರಮೇಶ್, ಸಂತೋಷ್ ಇದ್ದರು.