ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ-ಕುಶಾಲನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 275 ನಿರ್ಮಾಣಕ್ಕೆ ಸಂಬಂಧಿಸಿದ ವಿವಾದ ಇದೀಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಂಗಳಕ್ಕೆ ತಲುಪಿದೆ. ಸರ್ವೀಸ್ ರಸ್ತೆ ಮಾಡಬೇಕೆನ್ನುವ ಮನವಿಗೆ ಯಾರೊಬ್ಬರೂ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರಿಗೆ ನ್ಯಾಯ ಕೊಡಿಸಲು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೊಂದವರ ಬೆನ್ನಿಗೆ ನಿಂತಿದ್ದಾರೆ. ಮಾತ್ರವಲ್ಲದೆ ರೈತರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ.
2019ರಲ್ಲಿ ಶ್ರೀರಂಗಪಟ್ಟಣ-ಕುಶಾಲನಗರ ನಡುವಿನ 275ರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯ ಭೂ ಸ್ವಾಧೀನಕ್ಕೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ರೈತರಿಗೆ ವಾಣಿಜ್ಯ ಉದ್ದೇಶದ ಆಮಿಷವೊಡ್ಡಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆನ್ನುವ ಆರೋಪವಿದೆ. ಮಾತ್ರವಲ್ಲದೆ ಸ್ಥಳೀಯರು ಹಾಗೂ ರೈತರಿಗೆ ಅಗತ್ಯವಿರುವ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸದೇ ನಿರ್ಲಕ್ಷೃ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಅಧಿಕಾರಿಗಳ ವರ್ತನೆಗೆ ಬೇಸತ್ತ ರೈತರು ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರವೀಂದ್ರ ಶ್ರೀಕಂಠಯ್ಯ ಸ್ಥಳಕ್ಕೆ ಭೇಟಿ ನೀಡಿದರು. ಸರ್ವೀಸ್ ರಸ್ತೆಗೆ ಅನುವು ಮಾಡಿಕೊಡದ ಅಧಿಕಾರಿಗಳ ಕರ್ತವ್ಯಲೋಪ ಖಂಡಿಸಿ ಆ ರಸ್ತೆ ಮಾರ್ಗದ ನೂರಾರು ರೈತರು ಕಾರ್ಯವೈಖರಿ ವಿರುದ್ದ ಅತೃಪ್ತಿ ಹೊರಹಾಕಿದರು. ಅಂತೆಯೇ ಕಾಮಗಾರಿ ಪರಿಶೀಲಿಸಿದ ರವೀಂದ್ರ ಶ್ರೀಕಂಠಯ್ಯ, ಇಲ್ಲಿನ ಸಮಸ್ಯೆಯ ಗಂಭೀರತೆ ನನಗೆ ಅರ್ಥವಾಗಿದೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿತಿನ್ ಗಡ್ಕರಿ ಅವರ ಬಳಿಗೆ ಮುಂದಿನ ವಾರದಲ್ಲಿ 20 ಜನ ರೈತರ ನಿಯೋಗ ಕರೆದೊಯ್ದು ಅಗತ್ಯ ಸರ್ವೀಸ್ ರಸ್ತೆ ಮಂಜೂರು ಮಾಡಿಸುವ ಭರವಸೆ ವ್ಯಕ್ತಪಡಿಸಿದರು.
ಮುಖಂಡರಾದ ಬೆಳಗೊಳ ಲೋಕೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ದಶರಥ, ಯುವ ಘಟಕದ ಅಧ್ಯಕ್ಷ ಸಂಜಯ್, ಪಾಲಹಳ್ಳಿ ರಮೇಶ್, ಭರತ್‌ಕುಮಾರ್, ಸುನೀಲ್ ಇತರರಿದ್ದರು.
ರೈತರಿಗೆ ಅನುಕೂಲ ಕಲ್ಪಿಸಲಿ
ಶ್ರೀರಂಗಪಟ್ಟಣ ತಾಲೂಕು ವಿಶ್ವ ದರ್ಜೆಯ ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರೇಕ್ಷಣೀಯ ಸ್ಥಳ. ನಮ್ಮ ತಾಲೂಕಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಮ್ಮದೇನು ತಕರಾರಿಲ್ಲ. ಇಂತಹ ಅಭಿವೃದ್ಧಿಯನ್ನು ಸ್ವಾಗತಿಸುತ್ತೇವೆ. ಆದರೆ ಭೂಮಿ ಕಳೆದುಕೊಳ್ಳುವ ರೈತರ ಬದುಕಿನ ಬಗ್ಗೆ ಅಧಿಕಾರಿಗಳು ಸಹಾನುಭೂತಿ ತೋರದಿರುವುದು ವಿಪರ್ಯಾಸದ ಸಂಗತಿ ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಕ್ರೋಶ ಹೊರ ಹಾಕಿದರು.
ರೈತರ ಅಹವಾಲು ಆಲಿಸಿ ಮಾತನಾಡಿದ ಅವರು, ರಸ್ತೆ ಸೇರಿದಂತೆ ಮೂಲ ಸೌಕರ್ಯದ ಅಭಿವೃದ್ದಿಗೆ ನಮ್ಮದೇನು ವಿರೋಧವಿಲ್ಲ. ಆದರೆ ಹೆದ್ದಾರಿ ನಿರ್ಮಾಣದ ಹೆಸರಿನಲ್ಲಿ ರೈತರು ಹಾಗೂ ಜನಸಾಮಾನ್ಯರಿಗೆ ಅನಾನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಿ ಸರ್ವೀಸ್ ರಸ್ತೆ ನಿರ್ಮಿಸದಿರುವುದು ಅಧಿಕಾರಿಗಳ ಲೋಪವಲ್ಲವೇ ಎಂದು ಪ್ರಶ್ನಿಸಿದರು.
ಭೂ ಸ್ವಾಧೀನದಿಂದ ರೈತರ ಜಮೀನು ಇಬ್ಭಾಗವಾಗಿದೆ. ನೂರಾರು ರೈತರ ಜಮೀನು ರಸ್ತೆಯ ಇಕ್ಕೆಲ್ಲಗಳಲ್ಲಿದೆ. ಕೃಷಿ ಕೆಲಸಕ್ಕೆ ಅಗತ್ಯವಾಗ ಜನ-ಜಾನುವಾರು, ಟ್ರಾೃಕ್ಟರ್ ಮುಂತಾದ ಕೃಷಿ ಉಪಕರಣಗಳು ಹಾಗೂ ದವಸ, ಧಾನ್ಯಗಳನ್ನು ಸಾಗಿಸಲು ಅಗತ್ಯವಿರುವ ವಾಹನಗಳು ಸಂಚರಿಸಲು ಸರ್ವೀಸ್ ರಸ್ತೆ ಬೇಕೆಂಬ ಮನಸ್ಥಿತಿ ಶಾಸಕರು ಹಾಗೂ ಅಧಿಕಾರಿಗಳಿಗೆ ಇರದಿರುವುದು ಬೇಸರದ ಸಂಗತಿ. ಸರ್ವೀಸ್ ರಸ್ತೆ ನಿರ್ಮಾಣ ಸಂಬಂಧ ಈಗಾಗಲೇ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಲಾಗಿದ್ದು, ಮುಂದಿನ ವಾರ ದೆಹಲಿಗೆ ಸ್ಥಳೀಯ ರೈತರ ನಿಯೋಗ ಕರೆದುಕೊಂಡು ಹೋಗಿ ನಿತಿನ್ ಗಡ್ಕರಿ ಅವರ ಬಳಿ ಮನವಿ ಮಾಡಲಾಗುವುದು. ಅಂತೆಯೇ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಹಸಿರು ನಿಶಾನೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.