ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದ ಶ್ರೀ ರಂಗನಾಥಸ್ವಾಮಿ ನೂತನ ದೇವಾಲಯ. 
ಜಿಲ್ಲೆ

4ರಿಂದ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವ

ಎ. ಆರ್. ರಘುರಾಮ

ಅರಕಲಗೂಡು : ತಾಲೂಕಿನ ಇತಿಹಾಸ ಪ್ರಸಿದ್ಧ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ಏ.4ರಿಂದ 6ರವರೆಗೆ ನಡೆಯುವ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಂದು ಹಾಸನ ಮತ್ತು ಕೊಡಗು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.

ಈ ಭಾಗದಲ್ಲಿ ನಡೆಯುವ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ರೈತಾಪಿ ವರ್ಗದ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ವರ್ಷವೂ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಈ ಬಾರಿಯೂ ರಂಗನಾಥಸ್ವಾಮಿ ರಥೋತ್ಸವ ನಿಮಿತ್ತ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀ ಶಂಭುನಾಥ ಸ್ವಾಮೀಜಿ

ಏ.4ರಂದು ಮಧ್ಯಾಹ್ನ ಗೋಧೂಳಿ ಲಗ್ನದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿ ರಂಗನಾಥಸ್ವಾಮಿಗೆ ಮಹಾಮಂಗಳಾರತಿ ಮಾಡಲಾಗುವುದು. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ವಿವಿಧ ಪೂಜಾ ಕಾರ್ಯಗಳು, ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಹೋಮ ಹವನ ನೆರವೇರಿಸಿ ಸಂಜೆ 4.30 ರಿಂದ 5.30 ರೊಳಗೆ ಮಹಾ ರಥೋತ್ಸವ ನಡೆಸಲಾಗುತ್ತದೆ. ಸಂಜೆ ಶ್ರೀಕ್ಷೇತ್ರಕ್ಕೆ ಆಗಮಿಸುವ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಜಗದ್ಗುರು ಶ್ರೀ ಬಾಲ ಗಂಗಾಧರನಾಥ ಶ್ರೀಗಳ ಮೂರ್ತಿಯೊಂದಿಗೆ ಮುತ್ತಿನಪಲ್ಲಕ್ಕಿ ಉತ್ಸವದಲ್ಲಿ ಕರೆತರಲಾಗುವುದು. ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧಾರ್ಮಿಕ ಸಭೆ ಜರುಗಲಿದೆ. ಶಾಸಕರು, ಮಾಜಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ ಅನ್ನಸಂತರ್ಪಣೆ, ಧಾರ್ಮಿಕ ಸಭೆಯ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶನಿವಾರ ಬೆಳಗ್ಗೆ ಜಾತ್ರಾ ಮಹೋತ್ಸವಕ್ಕೆ ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ತೆರೆ ಬೀಳಲಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಚಿಕ್ಕಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಮತ್ತು ಕಲ್ಯಾಣಿ ಸ್ಥಾಪಿಸಿ ಭಕ್ತರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಬಾರಿ ಬರಗಾಲ ಆವರಿಸಿದ್ದರೂ ಸುಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಯಾವುದೇ ಸೌಲಭ್ಯಗಳ ಕೊರತೆ ಕಾಡದಂತೆ ನಿಗಾ ವಹಿಸುವುದಾಗಿ ಹೇಳಿದರು.

ಕಬ್ಬಳ್ಳಿ ಶಾಖಾ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ಅರಕಲಗೂಡು ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಮಹೇಶ್ ಹೊಡೆನೂರು, ಕೋಡಿಗೌಡ, ಬನ್ನೂರು ಅಣ್ಣಯ್ಯ ಇತರರಿದ್ದರು.