ಶ್ರೀನಿವಾಸಪುರ: ಪ್ರತಿನಿತ್ಯ ಈ ರಸ್ತೆಯಲ್ಲಿ ಸಂಚರಿಸುವುದೇ ದೊಡ್ಡ ಸಾಹಸದ ಕೆಲಸ, ಇನ್ನೂ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಂಬುಲೆನ್ಸ್ ಮತ್ತು ನಿತ್ಯ ಓಡಾಡುವವರ ಪರಿಸ್ಥಿತಿ ಹೇಳತೀರದಾಗಿದೆ.
ಶ್ರೀನಿವಾಸಪುರ ಕಸಬಾ ಹೋಬಳಿಯ ಕೊಡಿಚೆರುವು ಗ್ರಾಮದ ಮೂಲಕ ಹಾದು ಹೋಗುವ ಗುಂಡಮನತ್ತ ಮತ್ತು ಅಣ್ಣೆನಹಳ್ಳಿ ಮಾರ್ಗದ ಹೊಳೂರು, ರೋಜಾರಹಳ್ಳಿ ಕ್ರಾಸ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಶಾಪಗ್ರಸ್ಥ ಮಾರ್ಗವಾಗಿ ಉಳಿದಿದೆ.
ಇಡೀ ರಸ್ತೆ ತುಂಬಾ ಗುಂಡಿಗಳದ್ದೇ ಕಾರುಬಾರು ಹೆಚ್ಚಾಗಿದ್ದು, ಮಳೆ ಬಂದರೆ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬುದೇ ಗೊತ್ತಾಗುದಿಲ್ಲ. ಅನೇಕ ಬಾರಿ ಬೈಕ್ ಸವಾರರು ಬಿದ್ದು, ಗಾಯಗೊಂಡ ನಿದರ್ಶನಗಳಿವೆ.
ಸುಮಾರು 10ಕ್ಕೂ ಹೆಚ್ಚು ಗ್ರಾಮಸ್ಥರು ಇದೇ ರಸ್ತೆಯನ್ನು ಅವಲಂಬಿಸಿದ್ದು, ಜನಪ್ರತಿನಿಧಿಗಳು ಕೇವಲ ಚುನಾವಣೆ ಸಮಯದಲ್ಲಿ ಈ ಭಾಗಕ್ಕೆ ಬಂದು ಕೈ ಮುಗಿದು ಮತಗಿಟ್ಟಿಸಿಕೊಂಡು ಹೋದವರು ಮತ್ತೆ ಇತ್ತ ಕಡೆ ಯಾವತ್ತೂ ತಲೆ ಹಾಕುವುದಿಲ್ಲ. ಕೇಳಿದರೆ ಸರಿಪಡಿಸುತ್ತೇವೆ ಎಂದು ಆಶ್ವಾಸನೆ ನೀಡಿ ಸುಮ್ಮನಾಗುತ್ತಾರೆ. ಇನ್ನೂ ಅಧಿಕಾರಿಗಳು ತಮಗೆ ಅಧಿಕಾರವೇ ಇಲ್ಲವೆಂಬಂತೆ ಕಣ್ಣಿಗೆ ಕಂಡರೂ ಕಾಣದಂತೆ ಓಡಾಡುತ್ತಿದ್ದಾರೆ ಎಂದು ವಿವಿಧ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸುಮಾರು ವರ್ಷಗಳಿಂದ ಗ್ರಾಮದ ಮೂಲಕ ಹಾದು ಹೋಗುವ ವಾಹನ ಸವಾರರ ಪರಸ್ಥಿತಿ ಹಾಗೂ ಗ್ರಾಮಸ್ಥರು ತುರ್ತು ಪರಿಸ್ಥಿತಿ ವೇಳೆ ಹೋಗಬೇಕಾದರೆ ಸಂಕಷ್ಟ ಅನುಭವಿಸಬೇಕು. ಈ ಭಾಗದ ಸಾಕಷ್ಟು ಗ್ರಾಮೀಣ ರಸ್ತೆಗಳ ಪಾಡು ಇದೇ ಆಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದು ತ್ವರಿತಗತಿಯಲ್ಲಿ ರಸ್ತೆ ದುರಸ್ತಿಗೊಳಿಸಬೇಕು ಎಂದು ಕೊಡಿಚೆರವು ನಾಗರಾಜ್, ವೆಂಕಟೇಶ್, ಗುಂಡಮನತ್ತ ಗ್ರಾಮಸ್ಥರಾದ ರಾಮ್ ಚರಣ್, ಗೋವಿಂದ,ನಾರಾಯಣಸ್ವಾಮಿ, ಮುರ್ತೆಪ್ಪ, ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಸುಮಾರು 13 ವರ್ಷಗಳಿಂದ ಈ ರಸ್ತೆ ಕಾಮಗಾರಿ ನಡೆದಿಲ್ಲ. ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಬರುತ್ತಾರೆ, ಗೆದ್ದ ತಕ್ಷಣ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟವರು ಇತ್ತ ಮುಖ ಮಾಡುತ್ತಿಲ್ಲ. ಮಳೆಗಾಲವಾದ್ದರಿಂದ ಗುಣಿಗಳು ನೀರಿನಿಂದ ತುಂಬಿವೆ. ರಾತ್ರಿ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾರಣೆಗಳು ಇವೆ. ತಕ್ಷಣ ಎಚ್ಚೆತ್ತು ರಸ್ತೆಯ ಕಾಮಗಾರಿ ಮಾಡಬೇಕು ಇಲ್ಲವಾದರೆ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಮತದಾನ ಬಹಿಷ್ಕಾರ ಹಾಕಲಿದ್ದಾರೆ. ನಾಗತ್ನಮ್ಮ ಕೊಡಿಚೆರವು ಗ್ರಾಮಸ್ಥೆ ಈ ಭಾಗದಲ್ಲೇ ಒಂದು ವಾರದಲ್ಲೇ ನಾಲ್ಕೈದು ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಮಳೆ ಬಂದರೆ ಓಡಾಡಲು ಆಗುವುದಿಲ್ಲ. ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸುಮಾರು ಬಾರಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ಸರಿಪಡಿಸದಿದ್ದಲ್ಲಿ ಕೋಲಾರ- ಶ್ರೀನಿವಾಸಪುರ ಮುಖ್ಯರಸ್ತೆ ಬಂದ್ ಮಾಡುತ್ತೇವೆ. ಕೃಷ್ಣಮೂರ್ತಿ ಕೊಡಿಚೆರವು ಗ್ರಾಮಸ್ಥ
ಶ್ರೀನಿವಾಸಪುರ: ಪ್ರತಿನಿತ್ಯ ಸಾವಿರಾರು ಜನ ಓಡಾಡುವ, ವಾಹನಗಳು ಸಂಚರಿಸುವ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿಯೇ ಗುಂಡಿಗಳು ಬಿದ್ದಿದ್ದು, ಬಸ್‌ಗಳು ಸೇರಿ ಇತರೆ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಬೆಸ್ಕಾಂ ಇಲಾಖೆಯ ಮುಂಭಾಗ ರಸ್ತೆಯಲ್ಲೂ ಗುಂಡಿಗಳು ಬಿದ್ದಿದ್ದು, ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿರ್ಪಯಾಸ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನಾ ಕೆಲಸಗಳಿಗೆ ಪಟ್ಟಣಕ್ಕೆ ಬರುವ ಸುತ್ತಮುತ್ತಲಿನ ಗ್ರಾಮೀಣರು ಮತ್ತು ಪಟ್ಟಣ ನಿವಾಸಿಗಳು ಈ ಗುಂಡಿ ರಸ್ತೆಯಲ್ಲಿ ಸಂಚರಿಸಬೇಕಿದ್ದು, ಮಳೆ ಬಂದರೆ ಕೆಸರು, ಬಿಸಿಲು ಬಿದ್ದರೆ ಧೂಳಿದ ಮಜ್ಜನದಿಂದ ಕಂಗಾಲಾಗಿದ್ದಾರೆ.
ಪ್ರಪಂಚಕ್ಕೆ ಮಾವಿನ ರುಚಿ ಕೊಡುವ ಪಟ್ಟಣಕ್ಕೆ ಬೇರೆ ರಾಜ್ಯಗಳಿಂದ ಬಂದು ವ್ಯಾಪಾರ ವಹಿವಾಟು ಮಾಡುತ್ತಾರೆ.ಆದರೆ ನಮ್ಮ ಪಟ್ಟಣದಲ್ಲಿ ಅವವ್ಯಸ್ಥೆಯನ್ನು ಕಂಡು ಬೇಸರವಾಗುತ್ತದೆ. ಇಂತಹ ಸಮಯದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆ ಮುತುವರ್ಜಿವಹಿಸಿ ಪಟ್ಟಣಕ್ಕೆ ಬೇಕಾದ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿರುವುದು ಕರ್ತವ್ಯ ಎಂದು ನಾಗರೀಕ ವೇದಿಕೆ ಮುಖಂಡ ವೆಂಕಟೇಶ್‌ಗೌಡ ಒತ್ತಾಯಿಸಿದ್ದಾರೆ.
ಸರ್ಕಾರ ಕೋಟಿ ಗಟ್ಟಲೇ ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುತ್ತದೆ. ಆದರೆ ಸಾರ್ವಜನಿಕರಿಗೆ ಅಗತ್ಯ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ತಕ್ಷಣ ಎಚ್ಚೆತ್ತು ಸಂಬಂಧಪಟ್ಟ ಅಧಿಕಾರಿಗಳು ಗುಂಡಿ ಮುಚ್ಚಿಸಿಸುವಂತೆ ಆಗ್ರಹಿಸಿದರು.