ನಂಜನಗೂಡು: ದೀನ ದಲಿತರು ಹಾಗೂ ತಳ ಸಮುದಾಯಗಳ ಧ್ವನಿಯಾಗಿದ್ದ ಸಂಸದ ವಿ.ಶ್ರೀನಿವಾಸಪ್ರಸಾದ್ ತಾವು ನಂಬಿದ ತತ್ವಾದರ್ಶಗಳಿಗೆ ಬದ್ಧರಾಗಿ ರಾಜಕೀಯ ನಡೆಸಿದ ಮುತ್ಸದ್ದಿ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯ್ಕ ಹೇಳಿದರು.
ನಗರದ ಗೌರಿ ಘಟ್ಟ ಬೀದಿಯ ನಾಯಕರ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ನಾಯಕರ ಸಂಘದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ನಗರದ ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ 14 ತಳ ಸಮುದಾಯಗಳಿಗೆ ನಿವೇಶನ ನೀಡಿ, ಸಮುದಾಯ ಭವನಗಳನ್ನು ನಿರ್ಮಿಸಲು ಬುನಾದಿ ಹಾಕಿದ ಸಾಮಾಜಿಕ ನ್ಯಾಯದ ಹರಿಕಾರ ಎಂಬುದನ್ನು ನಿರೂಪಿಸಿದ್ದರು. ನನೆಗುದಿಗೆ ಬಿದ್ದಿದ್ದ ಗೌರಿಘಟ್ಟ ಬೀದಿಯ ವಾಲ್ಮೀಕಿ ಭವನವನ್ನು ನಿರ್ಮಿಸಿಕೊಟ್ಟಿದ್ದಾರೆ. ತಳ ಸಮುದಾಯಕ್ಕೆ ಸೇರಿದ ಎಂ.ಲತಾ ಸಿದ್ದಶೆಟ್ಟಿ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಾಡಿದ್ದರು. ಹಾಗೆಯೇ ಪಿ.ಶ್ರೀನಿವಾಸ್ ಅವರನ್ನು ಪುರಸಭೆ ಅಧ್ಯಕ್ಷರನ್ನಾಗಿಸಿದ್ದರು. ಮೊದಲ ಬಾರಿಗೆ ಪೌರ ಕಾರ್ಮಿಕ ಸಮುದಾಯದವರನ್ನು ನಗರಸಭೆಯ ಅಧ್ಯಕ್ಷರನ್ನಾಗಿದ ಕೀರ್ತಿ ಶ್ರೀನಿವಾಸಪ್ರಸಾದ್ ಅವರಿಗೆ ಸಲ್ಲುತ್ತದೆ ಎಂದು ನೆನೆದರು.
ಸಚಿವರಾಗಿದ್ದ ಡಿ.ಟಿ.ಜಯಕುಮಾರ್ ಅವರೊಂದಿಗೆ ಅವಿನಾಭವ ಸಂಬಂಧ ಹೊಂದಿದ್ದ ಅವರು ದೇವೇಗೌಡ ಸರ್ಕಾರದಲ್ಲಿ ಡಿ.ಟಿ.ಜಯಕುಮಾರ್ ಅವರಿಗೆ ಸಚಿವ ಸ್ಥಾನ ತಪ್ಪಿದಾಗ ಹಠ ಬಿಡದೆ ಅವರನ್ನು ಸಚಿವರನ್ನಾಗಿ ಮಾಡಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಬಿಜೆಪಿಗೆ ಗೆಲುವನ್ನು ತಂದುಕೊಟ್ಟರು ಎಂದರು.
ಬಿಜೆಪಿ ಮುಖಂಡ ಕುಂಬರಳ್ಳಿ ಸುಬ್ಬಣ್ಣ ಮಾತನಾಡಿ, ನಾಯಕ ಸಮುದಾಯದ ಸಿ.ಚಿಕ್ಕಮಾದು ಅವರಿಗೆ ಟಿಕೆಟ್ ಕೊಡಿಸಿ ಶಾಸಕರನ್ನಾಗಿ ಮಾಡಿದರು. ಶೋಷಿತರ ಬಗ್ಗೆ ಅವರು ಹೊಂದಿದ್ದ ಕಾಳಜಿಯನ್ನು ಮರೆಯುವಂತಿಲ್ಲ. ರಾಜಕೀಯ ಜೀವನದಲ್ಲಿ ಶುದ್ಧಹಸ್ತರಾಗಿ ನಡೆದುಕೊಂಡಿದ್ದಾರೆ. ಅವರ ಆದರ್ಶಗಳನ್ನು ಇಂದಿನ ಯುವ ರಾಜಕಾರಣಿಗಳು ಮೈಗೂಡಿಸಿಕೊಂಡು ಅವರ ಹಾದಿಯಲ್ಲಿ ನಡೆಯಬೇಕು ಎಂದರು.
ನಾಯಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಂಗಾರಸ್ವಾಮಿ, ಖಜಾಂಚಿ ರಂಗಸ್ವಾಮಿ, ಕಾಂಗ್ರೆಸ್ ಎಸ್‌ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ ನಾಯಕ, ಪಿ.ಶ್ರೀನಿವಾಸ್, ಮಹಸದೇವ ನಾಯಕ, ಕೆ.ಡಿ.ಮಂಜು, ಹೆಡತಲೆ ನಾಗರಾಜು, ಸುರೇಂದ್ರ, ಹಳ್ಳದಕೇರಿ ನಾಗರಾಜು, ಕುಮಾರ್, ಗೋವಿಂದರಾಜು, ರಂಗಸ್ವಾಮಿ ಉಪಸ್ಥಿತರಿದ್ದರು.