ಮೈಸೂರು: ಸಜ್ಜನ ರಾಜಕಾರಣಿ ಶ್ರೀನಿವಾಸಪ್ರಸಾದ್ ಅವರ ವಿಚಾರಧಾರೆ ಹಾಗೂ ಹೋರಾಟದ ಬದುಕು ಇಂದಿನ ಯುವಕರಿಗೆ ಆದರ್ಶವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಡಾ.ಬಿ.ಆರ್.ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್, ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ ಪ್ರತಿಷ್ಠಾನ ಹಾಗೂ ಸಮಾನತೆ ಪ್ರಕಾಶನದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ಶ್ರದ್ಧ್ಧಾಂಜಲಿ ಕಾರ್ಯಕ್ರಮ ‘ಸ್ವಾಭಿಮಾನಿಗೆ ಸಾವಿರದ ನುಡಿ ನಮನ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ವಿಚಾರಧಾರೆಗಳಲ್ಲಿ ಯಾರಿಗೆ ಸ್ಪಷ್ಟತೆ ಇರುತ್ತದೋ ಅಂತಹವರು ಮನುಷ್ಯತ್ವದ ಪರ ಇರಲು ಸಾಧ್ಯ. ಮನುಷ್ಯತ್ವ ಎನ್ನುವುದು ಜಾತಿಯಿಂದ ಬರುವುದಿಲ್ಲ. ಧರ್ಮದಿಂದ ಬರುವುದಿಲ್ಲ. ಪ್ರೀತಿ ವಿಶ್ವಾಸದಿಂದ ಮಾತ್ರ ಬರುತ್ತದೆ. ಪ್ರತಿಯೊಬ್ಬರೂ ಒಬ್ಬರನ್ನು ಒಬ್ಬರು ಪ್ರೀತಿಸಬೇಕು, ದ್ವೇಷಿಸಬಾರದು. ಈ ಹಿನ್ನೆೆಲೆಯಲ್ಲಿ ಪ್ರಸಾದ್ ಅವರು ಎಲ್ಲರನ್ನೂ ಒಳಗೊಂಡ ಸಜ್ಜನ ರಾಜಕಾರಣಿಯಾಗಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶ್ರೀನಿವಾಸ ಪ್ರಸಾದ್ ದಲಿತ ವರ್ಗಕ್ಕೆೆ ಮಾತ್ರ ಸೀಮಿತವಲ್ಲ. ಅವರು ಎಲ್ಲ ವರ್ಗದ ನಾಯಕರು. ಸಾಮಾಜಿಕ ನ್ಯಾಯದ ಚಾಂಪಿಯನ್. ಒಬ್ಬ ಮಾದರಿ ಜನಪ್ರತಿನಿಧಿ ಹೇಗಿರಬೇಕು ಎನ್ನುವುದನ್ನು ಪ್ರಸಾದ್ ಅವರು ತೋರಿಸಿಕೊಟ್ಟು ಹೋಗಿದ್ದಾರೆ. ಅದನ್ನು ಪಾಲಿಸಿಕೊಂಡು ಮುನ್ನಡೆಯಬೇಕು ಎಂದರು.
ಬುದ್ಧ ಧಮ್ಮ ವಿಹಾರ ಡಾ.ಕಲ್ಯಾಣಸಿರಿ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ, ಸಂಸದ ಪ್ರತಾಪ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಎ.ಆರ್.ಕೃಷ್ಣಮೂರ್ತಿ, ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಸಿ.ಎಚ್.ದ್ವಾರಕಾಥ್, ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್ ಇತರರು ಇದ್ದರು.