ಮಂಗಳೂರು: ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್ಗಳಲ್ಲಿ ಅಶ್ವತ್ಥಪುರ ಶ್ರೀನಿವಾಸ ಗೌಡ(ಸೀನು) ಕ್ರಮಿಸುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ವಿುಸಿದ್ದಾರೆ.
ಫೆ.1ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಶ್ರೀನಿವಾಸ್ ಕೋಣಗಳೊಂದಿಗೆ ನೇಗಿಲು ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕರೆಯನ್ನು 13.62 ಸೆಕೆಂಡ್ಗಳಲ್ಲಿ ಕ್ರಮಿಸಿದ್ದಾರೆ. ಇದನ್ನು 100 ಮೀಟರ್ಗೆ ಬದಲಾಯಿಸಿದರೆ 9.55 ಸೆಕೆಂಡ್ಗಳಲ್ಲಿ ಓಡಿದಂತಾಗುತ್ತದೆ.
ಇಷ್ಟು ವೇಗದಲ್ಲಿ ಈವರೆಗೆ ಕಂಬಳ ಕರೆಯಲ್ಲಿ ಯಾರೂ ಓಡಿರುವ ದಾಖಲೆ ಇಲ್ಲ. ವಿಶ್ವವಿಖ್ಯಾತ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಟ್ರ್ಯಾಕ್ ನಲ್ಲಿ 9.58 ಸೆಕೆಂಡ್ಗಳಲ್ಲಿ 100 ಮೀ. ಓಡಿರುವುದನ್ನು ಕೆಸರುಗದ್ದೆಯಲ್ಲಿ ಓಡಿ ರುವ ಶ್ರೀನಿವಾಸ ಗೌಡ ಮೀರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಆದರೆ, ಈ ಹೋಲಿಕೆ ಸರಿಯಲ್ಲ ಎಂದು ಕಂಬಳ ಕ್ಷೇತ್ರದ ಪರಿಣತರೇ ಹೇಳುತ್ತಾರೆ.