ಶ್ರೀನಿವಾಸ್ ವೆಹಿಕಲ್: ಶ್ರೀನಿವಾಸ್ ವಿವಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಜಿಐ ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ ತಂತ್ರಜ್ಞಾನದ ಕುರಿತು ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರಿಗೆ ವಿವರಿಸಿದರು. ಎ. ವಿಜಯಲಕ್ಷ್ಮೀ ಆರ್. ರಾವ್ ಇದ್ದರು.
- ಶ್ರೀನಿವಾಸ್ ವಿವಿ ಕುಲಾಧಿಪತಿ ಎ. ಶ್ರೀನಿವಾಸ್ ರಾವ್ ಬಣ್ಣನೆ
- ಚಾಲಕನಿಲ್ಲದ ವಿದ್ಯುತ್ ವಾಹನ, ಎಐ ರೋಬೋಟ್ ಅನಾವರಣ
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ತಯಾರಿಸಿದ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನ ಹಾಗೂ ಜಿಐ ರಿಸೆಪ್ಷನ್ ರೋಬೋಟ್‌ಗಳನ್ನು ಅನಾವರಣಗೊಳಿಸಲಾಯಿತು.
ಜು. 23ರಂದು ಮುಕ್ಕ ಕ್ಯಾಂಪಸ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಕುಲಾಧಿಪತಿ ಡಾ. ಎ. ಶ್ರೀನಿವಾಸ್ ರಾವ್ ಅವರು ವಿವರಿಸಿದರು. ಸಾಧನೆಯನ್ನು ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ದೇಶದಲ್ಲೇ ಪ್ರಪ್ರಥಮವಾಗಿ ಮಾಡಿ ತೋರಿಸಿದ್ದಾರೆ. ವಿದ್ಯಾರ್ಥಿಗಳ ತಾಂತ್ರಿಕ ಪ್ರತಿಭೆ ಮತ್ತು ನವೋದ್ಯಮ ಸಾಮರ್ಥ್ಯಕ್ಕೆ ಇದೊಂದು ಹೊಸ ಮೈಲಿಗಲ್ಲಾಗಿದೆ ಎಂದು ಕುಲಾಧಿಪತಿಗಳು ಬಣ್ಣಿಸಿದರು.
ವಾಹನದ ವೈಶಿಷ್ಟ್ಯವೇನು?
ಅಭಿವೃದ್ಧಿಪಡಿಸಲಾದ AI ಆಧಾರಿತ ಸ್ವಯಂಚಾಲಿತ ವಿದ್ಯುತ್ ವಾಹನದಲ್ಲಿ ಲಿಡಾರ್, AI ವಿಷನ್ ಸಿಸ್ಟಮ್, ಜಿಪಿಎಸ್ ಆಧಾರಿತ ಮಾರ್ಗಸಂಚಾರ ಹಾಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆಂಟ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಪ್ರಸ್ತುತ ಈ ವಾಹನ ಪೂರ್ವನಿರ್ಧರಿತ ಮಾರ್ಗದಲ್ಲಿ ಸಂಪೂರ್ಣ ಸ್ವಯಂಚಾಲಿತವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಸುರಕ್ಷತೆ ಮತ್ತು ಕಾರ್ಯಾಚರಣೆಯ ಅನುಕೂಲತೆಗಾಗಿ ರಿಮೋಟ್ ಕಂಟ್ರೋಲ್ ಓವರ್‌ರೈಡ್ ವ್ಯವಸ್ಥೆ ಸಹ ಒದಗಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಪೂರ್ವ ನಕ್ಷೆ ಇಲ್ಲದ ಪ್ರದೇಶಗಳಲ್ಲಿಯೂ ಸಹ ಸ್ವಯಂ ಮಾರ್ಗ ಪತ್ತೆ ಹಚ್ಚಿ ಸಂಚರಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿದಿದೆ. ಈ ವಾಹನವು ಆರು ಆಸನಗಳ ಸಾಮರ್ಥ್ಯ ಹೊಂದಿದ್ದು, ಅಗತ್ಯವಿದ್ದಲ್ಲಿ ರೋಗಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಪರಿವರ್ತಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ದಟ್ಟ ವಾಹನ ಸಂಚಾರವನ್ನು ತಪ್ಪಿಸಲು ಆಂಬುಲೆನ್ಸ್ ರೀ-ರೌಟಿಂಗ್ ಆ್ಯಪ್ ಜೊತೆ ಕಾರ್ಯನಿರ್ವಹಿಸುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಈ ವಾಹನದಲ್ಲಿ ಲಿಡಾರ್, ಅಲ್ಟ್ರಾಸೋನಿಕ್ ಸಂವೇದಕ, ಒಡೋಮೆಟ್ರಿ, ವಿಶುವಲ್ ಸ್ಲ್ಯಾಮ್ ಹಾಗೂ ಜಿಐ ಆಧಾರಿತ ಮ್ಯಾಪಿಂಗ್ ಗಣನಾ ಕ್ರಮಾವಳಿಗಳನ್ನು ನಿರ್ವಹಿಸುವ ಸಿಂಗಲ್ ಬೋರ್ಡ್ ಕಂಪ್ಯೂಟರ್ ಸೇರಿದಂತೆ ಅತ್ಯಾಧುನಿಕ ಸಂವೇದಕ ಫ್ಯೂಷನ್ ಟೆಕ್ನಾಲಜಿ ಅಳವಡಿಸಲಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ದೂರ ನಿಯಂತ್ರಿತ ವಾಹನವಾಗಿ, ಕೈಗಾರಿಕಾ ಬಳಕೆಗಾಗಿ, ಮಾನವರ ಸುರಕ್ಷಿತ ಸಂಚಾರಕ್ಕೆ ಹಾಗೂ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತ್ವರಿತವಾಗಿ ಸಾಗಿಸಲು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಈ ಯೋಜನೆಯ ಒಟ್ಟು ವೆಚ್ಚ ಸುಮಾರು 4ರಿಂದ 5 ಲಕ್ಷ ಆಗಿದ್ದು, ಕೇವಲ 6 ತಿಂಗಳ ಅವಧಿಯಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಯೋಜನೆಯ ಮಾರ್ಗದರ್ಶಕ ಪ್ರೊ. ವಿಶ್ವಾಸ್ ಸಿ. ಶೆಟ್ಟಿ ಅವರು ವಿವರಿಸಿದರು.
ವಿದ್ಯಾರ್ಥಿಗಳಾದ ಶ್ರೇಯಸ್, ಅದ್ವಿತೀಯ, ಉಜ್ವಲ್, ಅಕ್ಷಯ್, ಮಂಜುನಾಥ್ ಹಾಗೂ ಪ್ರಖ್ಯಾತ್ ಅವರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು.
ಶ್ರೀನಿವಾಸ್ ವಿವಿ ಟ್ರಸ್ಟಿ ಮಂಡಳಿಯ ಸದಸ್ಯೆ ಎ. ವಿಜಯಲಕ್ಷ್ಮೀ ಆರ್. ರಾವ್, ಉಪಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ, ಕುಲಸಚಿವ ಡಾ. ಅನಿಲ್ ಕುಮಾರ್, ಅಭಿವೃದ್ಧಿ ವಿಭಾಗದ ಕುಲಸಚಿವ ಡಾ. ಅಜಯ್ ಕುಮಾರ್, ಸಹಾಯಕ ಕುಲಸಚಿವೆ ಡಾ. ಜಯಶ್ರೀ ಬೋಳಾರ್, ಕಾಲೇಜಿನ ಮುಖ್ಯಸ್ಥ ಡಾ. ರಾಮಕೃಷ್ಣ ಎನ್. ಹೆಗಡೆ, ಸಂಶೋಧನಾ ವಿಭಾಗದ ನಿರ್ದೇಶಕ ಡಾ. ಪ್ರವೀಣ್ ಬಿ.ಎಂ., ರಿಸರ್ಚ್ ಅಸೋಸಿಯೇಟ್ ವಿಶಾಕ್ ಮೇಂಡನ್ ಉಪಸ್ಥಿತರಿದ್ದರು.
ಶ್ರೀನಿಬೋಟ್ AI ರೋಬೋಟ್
ಶ್ರೀನಿವಾಸ್ ವಿಶ್ವವಿದ್ಯಾಲಯಕ್ಕಾಗಿ ವಿದ್ಯಾರ್ಥಿಗಳು ವಿಶೇಷವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ಅತ್ಯಾಧುನಿಕ ಸ್ವಾಗತ ಹಾಗೂ ಸಂದರ್ಶಕರ ಸಹಾಯಕ AI ರಿಸೆಪ್ಷನ್ ರೋಬೋಟ್ ಶ್ರೀನಿಬೋಟ್ ಅನ್ನು ವಿವಿಯಲ್ಲಿ ಅಳವಡಿಸಲಾಗಿದೆ. ಶೈಕ್ಷಣಿಕ ಸಂಬಂಧಿತ ಯಾವುದೇ ಪ್ರಶ್ನೆಗಳಿಗೆ ನೈಸರ್ಗಿಕ ಧ್ವನಿ ಸಂವಾದದ ಮೂಲಕ ರೋಬೋಟ್ ಉತ್ತರಿಸುತ್ತದೆ. ಸ್ವಾಗತ ರೋಬೋಟ್ ಅನ್ನು ಸುಮಾರು 5 ಲಕ್ಷ ವೆಚ್ಚದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ರಿಸರ್ಚ್ ಅಸೋಸಿಯೇಟ್‌ಗಳಾದ ನಿಕೇತ್ ಜಾದವ್, ಜೋಯಲ್ ಜೋಸ್ ಹಾಗೂ ಸಮರ್ಥ್ ನಾಗನೂರ್ ಅವರು ಇದನ್ನು ತಯಾರಿಸಿದ್ದಾರೆ.
ಕೆಲವೇ ತಿಂಗಳಲ್ಲಿ ವಿದ್ಯಾರ್ಥಿಗಳು ಈ ಅಭೂತಪೂರ್ವ ಸಾಧನೆಯನ್ನು ಮಾಡಿದ್ದಾರೆ. ಇದು ದೇಶಕ್ಕೆ ಮಾದರಿಯಾಗಿದೆ. ನಮ್ಮ ಸಂಸ್ಥಾಪಕರಾದ ದಿವಂಗತ ಡಾ. ಸಿ.ಎ. ರಾಘವೇಂದ್ರ ರಾವ್ ಅವರ ಕನಸೇ ಇದಾಗಿತ್ತು. ತಂತ್ರಜ್ಞಾನ ಸಂಶೋಧನಾ ಕ್ಷೇತ್ರಕ್ಕೆ ಹೆಮ್ಮೆಯ ವಿಚಾರವಿದು. ಶಿಕ್ಷಣದ ಬದ್ಧತೆಯನ್ನು ಇದು ಪ್ರತಿಫಲಿಸುತ್ತದೆ.
— ಡಾ. ಎ. ಶ್ರೀನಿವಾಸ್ ರಾವ್, ಕುಲಾಧಿಪತಿ