ಮೈಸೂರು: ಶ್ರೀನಿವಾಸ್ ಪ್ರಸಾದ್ ಅವರು ರಾಜಿ ಅಥವಾ ಹೊಂದಾಣಿಕೆ ರಾಜಕಾರಣ ಮಾಡಿದ್ದರೆ ಇನ್ನಷ್ಟು ಉನ್ನತ ಹುದ್ದೆ ಪಡೆಯಬಹುದಿತ್ತು. ಆದರೆ ಅವರು ಹಾಗೇ ಮಾಡಲಿಲ್ಲ. ಆದರೂ ಸಿಕ್ಕ ಅವಕಾಶ ಸದ್ವಿನಿಯೋಗ ಪಡಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.
ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸಂಸದ ವಿ.ಶ್ರೀನಿವಾಸಪ್ರಸಾದ್ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭ’ದಲ್ಲಿ ಮಾತನಾಡಿದರು
ಪ್ರಸಾದ್ ಅವರನ್ನು ಅರ್ಥ ಮಾಡಿಕೊಂಡಷ್ಟೇ ಅಪಾರ್ಥವನ್ನು ಮಾಡಿಕೊಂಡಿದ್ದಾರೆ. ಅವರು ಪ್ರಬಲ ಕೋಮಿನ ವಿರುದ್ಧ ಇದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಿದ್ದರೆ 8 ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಿರಲಿಲ್ಲ ಎಂದು ಹೇಳಿದರು.
ಶ್ರೀನಿವಾಸ್ ಪ್ರಸಾದ್ ಯಾವುದೇ ಹಗರಣ, ಅಕ್ರಮದಲ್ಲಿ ಸಿಲುಕಿಲ್ಲ. ರಾಜ್ಯ ಕಂಡ ಸಚ್ಛಾರಿತ್ರೃವುಳ್ಳ ಅಪರೂಪದ ರಾಜಕಾರಣಿಗಳಲ್ಲಿ ಪ್ರಸಾದ್ ಒಬ್ಬರು. ಅವರು ಕೇವಲ ದಲಿತ ಸಮುದಾಯದ ನಾಯಕರಲ್ಲ, ಸರ್ವ ಸಮುದಾಯಗಳ ನಾಯಕ ಎಂದರು.