ಶಿರಸಿ: ಜಿಲ್ಲೆಯ ಪ್ರಸಿದ್ಧ ಧಾರ್ವಿುಕ ಕೇಂದ್ರವಾದ ಇಲ್ಲಿನ ಶ್ರೀ ರಾಘವೇಂದ್ರ ಮಠದ ನೂತನ ಉಪಾಧ್ಯಕ್ಷರಾಗಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಹೆಬ್ಬಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಮಾಜಮುಖಿ ಕಾರ್ಯದಲ್ಲಿ ಸದಾ ತೊಡಗಿಕೊಂಡಿರುವ ಹೆಬ್ಬಾರ್, ಜಿಲ್ಲೆಯಲ್ಲಿ 20ಕ್ಕೂ ಅಧಿಕ ಕೆರೆ ಅಭಿವೃದ್ಧಿ, ಸ್ವಚ್ಛತಾ ಅಭಿಯಾನ, ಗೋ ರಕ್ಷಣೆ, ಕುಡಿಯುವ ನೀರಿನ ಸೌಲಭ್ಯ, ಆಂಬುಲೆನ್ಸ್ ಸೇವೆ ನೀಡುವ ಜತೆಗೆ ಶೈಕ್ಷಣಿಕ, ಧಾರ್ವಿುಕ ಸೇವೆಗಳಲ್ಲಿ ನಿರಂತರ ತೊಡಗಿಕೊಂಡವರು. ಅವರಿಗೆ ಶ್ರೀಮಠದ ಹೊಸ ಜವಾಬ್ದಾರಿ ಕೂಡ ಹೆಗಲೇರಿದಂತಾಗಿದೆ. ಗುರುವಾರ ರಾಘವೇಂದ್ರ ಮಠದ ಆಡಳಿತ ಮಂಡಳಿಯ ಸಭೆಯಲ್ಲಿ ಖಾಲಿ ಇದ್ದ ಉಪಾಧ್ಯಕ್ಷ ಹುದ್ದೆಗೆ ಹೆಬ್ಬಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮಠದ ಅಧ್ಯಕ್ಷ ಡಿ.ಡಿ. ಮಾಡಗೇರಿ, ಕಾರ್ಯದರ್ಶಿ ಪ್ರೊ. ಕೆ.ವಿ. ಭಟ್ಟ, ನಿರ್ದೇಶಕರಾದ ಐ.ಎಂ. ಹೆಗಡೆ, ಗಣಪತಿ ಶೇಟ್ ಕಾಗೇರಿ, ಅರವಿಂದ ಪೈ, ಭಾಸ್ಕರ ಶೇಟ್, ನಾಗೇಶ ಕಾಮತ್, ಗಿರಿಧರ ಕಾಮತ್, ಉದಯ ಲಾಡ್, ಅನಿಲ್ ಗಾಂವಕರ್, ಅಜಿತ್ ಪರ್ವತಿಕರ್ ಇದ್ದರು.