ಜಿಲ್ಲೆ

ಶ್ರೀನಿವಾಸ ವಿವಿ ವತಿಯಿಂದ ವಿಧಾನ ಸಭಾಧ್ಯಕ್ಷರಿಗೆ ಸನ್ಮಾನ

ಮಂಗಳೂರು: ಶ್ರೀನಿವಾಸ ವಿಶ್ವ ವಿದ್ಯಾಲಯ ಮಂಗಳೂರು ವತಿಯಿಂದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಗರದಲ್ಲಿ ನಡೆಯಿತು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಯು. ಟಿ. ಖಾದರ್, ದೇಶದ ಬೆಳವಣಿಗೆ ಇಂದಿನ ಹಾಗೂ ಮುಂದಿನ ಯುವಪೀಳಿಗೆಯಿಂದ ಸಾಧ್ಯ. ಉತ್ತಮ ಭವಿಷ್ಯದ ದೃಷ್ಟಿಯಿಂದ ಶಿಕ್ಷಣಕ್ಕೆ ಹಾಗೂ ಶಿಕ್ಷಣ ಸಂಸ್ಥೆಗೆ ನೆರವು ನೀಡುವುದಾಗಿ ಹೇಳಿದರು. ಅಂತೆಯೇ ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ನೀಗಿಸಲು ಯೋಜನೆ ಮಾಡಲಾಗುವುದು ಎಂದು ಭರವಸೆ ನೀಡಿದರು.


ಶ್ರೀನಿವಾಸ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿ ಡಾ.ಎ.ಶ್ರೀನಿವಾಸ ರಾವ್ ಮಾತನಾಡಿ, ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ನಾವು, ನಿಮ್ಮ ಜತೆಯಾಗುತ್ತೇವೆ. ವನಮಹೋತ್ಸವಕ್ಕೆ ದೊಡ್ಡ ಸಂಖ್ಯೆಯಲ್ಲಿ ಸಸಿ ನೆಡುವ ಉದ್ದೇಶವಿದೆ ಇದರಿಂದ ಮುಂದೆ ಮಳೆಯ ಸಮಸ್ಯೆ ಕಡಿಮೆಯಾಗಬಹುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವ ವಿದ್ಯಾಲಯದ ಕುಲಾಧಿಪತಿ ಡಾ.ಸಿಎ ಎ. ರಾಘವೇಂದ್ರ ರಾವ್ ಮಾತನಾಡಿ, ಸ್ಪೀಕರ್ ಆಗಿ ಆಯ್ಕೆಯಾದ ಯು. ಟಿ. ಖಾದರ್ ಅವರನ್ನು ಅಭಿನಂದಿಸಿದರು. ಇವರು ಸೋಲಿಲ್ಲದ ಸರದಾರ ಎಂದು ಶ್ಲಾಘಿಸಿದ ಅವರು, ನಿಮ್ಮಿಂದ ಎಲ್ಲ ಕ್ಷೇತ್ರದಲ್ಲೂ ಬೆಳವಣಿಗೆ ಆಗಲಿ ಎಂದರು.

ಶ್ರೀನಿವಾಸ ವಿಶ್ವವಿದ್ಯಾಲಯ, ಆಡಳಿತ ಮಂಡಳಿ, ಟ್ರಸ್ಟಿ ಸದಸ್ಯರಾದ ಎ.ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇಆರ್., ಎ.ಮಿತ್ರಾ ಎಸ್.ರಾವ್, ಅಭಿವೃದ್ಧಿ ಕುಲಸಚಿವ ಡಾ.ಅಜಯ್ ಕುಮಾರ್, ಶ್ರೀನಿವಾಸ ಸಮೂಹ ಸಂಸ್ಥೆಗಳ ಡೀನ್ ಮತ್ತು ಪ್ರಾಂಶುಪಾಲರು ಉಪಸ್ಥಿತರಿದ್ದರು.


ಶ್ರೀನಿವಾಸ ವಿವಿ ಉಪ ಕುಲಪತಿ ಡಾ. ಪಿ. ಎಸ್. ಐತಾಳ್ ಸ್ವಾಗತಿಸಿದರು, ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್ ಕುಮಾರ್ ವಂದಿಸಿದರು. ಡಾ.ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.