ಜಿಲ್ಲೆ

ಶ್ರೀ ವಿದ್ಯಾಶಂಕರ ಸನ್ನಿಧಿಯಲ್ಲಿ ವಿಶೇಷ ಅಭಿಷೇಕ

Chikkamagaluru

ಶೃಂಗೇರಿ: ಶ್ರೀಮಠದಲ್ಲಿ ಶುಕ್ರವಾರ ತುಂಗಾ ಪುಷ್ಕರ ಮಹೋತ್ಸವ ಅಂಗವಾಗಿ ಬೆಳಗ್ಗೆ 8 ಗಂಟೆಗೆ ತುಂಗಾ ನದಿಗೆ ಕಲ್ಪೋಕ್ತಪೂಜೆ ನೆರವೇರಿತು. ನಂತರ ತುಂಗಾ ಕಲಶವನ್ನು ಉತ್ಸವದ ಮೂಲಕ ತರಲಾಯಿತು. ಶ್ರೀ ಶಾರದಾಂಬ, ಶ್ರೀ ಶಂಕರ ಭಗತ್ಪಾದರು ಹಾಗೂ ಶ್ರೀ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.

ರಾತ್ರಿ ಶ್ರೀ ಶಕ್ತಿಗಣಪತಿಗೆ ತೆಪ್ಪೋತ್ಸವಕ್ಕೂ ಮುನ್ನಾ ಯತಿವರ್ಯರು ತುಂಗೆ, ಶ್ರೀ ವರಾಹಮೂರ್ತಿ ಹಾಗೂ ಶ್ರೀ ಶಾರದೆಯ ಸಾಲಂಕೃತಗೊಂಡ ವಿಗ್ರಹಗಳಿಗೆ ಪೂಜೆ ಸಲ್ಲಿಸಿದರು. ನಂತರ ಸಾಲಂಕೃತಗೊಂಡ ದೋಣಿಯಲ್ಲಿ ಕೂರಿಸಿದ ಶ್ರೀಶಕ್ತಿಗಣಪತಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.

ವೇದ ಘೊಷಗಳೊಂದಿಗೆ ಶ್ರೀ ಮಠದ ಪುರೋಹಿತರು ತುಂಗಾರತಿ ಬೆಳಗಿದರು. ಮಹಿಳೆಯರು ತುಂಗೆಗೆ ಜ್ಯೋತಿಗಳನ್ನು ಸಮರ್ಪಿಸಿದರು. ತಾಲೂಕಿನ ಭಕ್ತ್ತು ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು. ಶನಿವಾರ ಶ್ರೀ ಆಂಜನೇಯ ಸ್ವಾಮಿ ತೆಪ್ಪೋತ್ಸವ ಜರುಗಲಿದೆ.