ಶೃಂಗೇರಿ: ಶ್ರೀಮಠದಲ್ಲಿ ಶನಿವಾರ ತುಂಗಾಪುಷ್ಕರ ಮಹೋತ್ಸವದ ಧಾರ್ವಿುಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ತುಂಗಾನದಿಗೆ ಕಲ್ಪೋಕ್ತಪೂಜೆ ನೆರವೇರಿತು.
ನಂತರ ತುಂಗಾಕಲಶವನ್ನು ಉತ್ಸವದ ಮೂಲಕ ತರಲಾಯಿತು. ಶ್ರೀ ಶಾರದಾಂಬ, ಶ್ರೀ ಶಂಕರಭಗತ್ಪಾದರು ಹಾಗೂ ಶ್ರೀ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನಡೆಸಲಾಯಿತು. ನಂತರ ಶ್ರೀ ಶಾರದೆ ಸನ್ನಿಧಿಯಲ್ಲಿ ಲಕ್ಷಾರ್ಚನೆ ನಡೆಯಿತು.
ರಾತ್ರಿ ಶ್ರೀ ಶಂಕರಭಗತ್ಪಾದರ ತೆಪ್ಪೋತ್ಸವಕ್ಕೂ ಮುನ್ನಾ ಯತಿವರ್ಯರು ಶ್ರೀತುಂಗೆ, ಶ್ರೀ ವರಾಹಮೂರ್ತಿ ಹಾಗೂ ಶ್ರೀ ಶಾರದೆಯ ಸಾಲಂಕೃತಗೊಂಡ ವಿಗ್ರಹಗಳಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ಸಾಲಂಕೃತಗೊಂಡ ದೋಣಿಯಲ್ಲಿ ಕೂರಿಸಿದ ಶ್ರೀ ಶಂಕರಭಗವತ್ಪಾದರ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ತೆಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೇದ ಘೊಷಿಗಳೊಂದಿಗೆ ಮಠದ ಪುರೋಹಿತರು ತುಂಗಾರತಿ ಬೆಳಗಿದರು. ಮಹಿಳೆಯರು ತುಂಗೆಗೆ ಜ್ಯೋತಿಗಳನ್ನು ಸಮರ್ಪಿಸಿದರು. ತಾಲೂಕಿನ ಭಕ್ತರು ಶ್ರದ್ಧಾಭಕ್ತಿಯಿಂದ ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು. ನ.30ರ ಬೆಳಗ್ಗೆ 7ಗಂಟೆಗೆ ಶ್ರೀ ಮಲಹಾನಿಕರೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ರುದ್ರಹೋಮ ಪೂರ್ಣಾಹುತಿ ನಡೆಯಲಿದೆ. ರಾತ್ರಿ ಕೃತ್ತಿಕೋತ್ಸವ ಪ್ರಯುಕ್ತ ಶ್ರೀ ಭವಾನಿಮಲಹಾನಿಕರೇಶ್ವರ, ಶ್ರೀ ಶಾರದಾಂಬೆ, ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ವಿದ್ಯಾಶಂಕರ ಸ್ವಾಮಿ ತೆಪ್ಪೋತ್ಸವ ಜರುಗಲಿದೆ.