ಮೈಸೂರಿನ ಶಕ್ತಿ ಪೀಠದಲ್ಲಿ ವಿಶೇಷ ಪೂಜಾ ಮಹೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಂಗಮ * ಅಭಿನವ ಶಂಕರಾಲಯದಲ್ಲಿ ಹೋಮ- ಹವನ ಎ.ಆರ್. ರಘುರಾಮ ಮೈಸೂರು ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಅರಮನೆ ಸಮೀಪದ ಅಗ್ರಹಾರದಲ್ಲಿರುವ ಶಕ್ತಿ ಶಾರದೆ ಪೀಠ ಶತಮಾನ ಕಂಡ ಸನ್ನಿಧಿ. ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಂಕರಮಠದ ನಿರ್ವಹಣೆಯಲ್ಲಿರುವ ಶ್ರೀ ಶಾರದಾ ಮಂದಿರವಿದು. ನಿತ್ಯವೂ ದೇವಿಯ ಆರಾಧನೆಯೊಂದಿಗೆ ಶಾಸ್ತ್ರ- ಸಂಪ್ರದಾಯಗಳ ಪಾಲನೆ, ವೇದಾಧ್ಯಯನ, ಹೋಮ-ಹವನ, ಗೋ ಸಂರಕ್ಷಣೆ, ಅಕ್ಷರಾಭ್ಯಾಸ ಸೇರಿದಂತೆ ಹತ್ತು ಹಲವು ವಿಧದಲ್ಲಿ ನಾಡಿನ ಆಸ್ತಿಕರಿಗೆ ಅಗಣಿತ ಸೇವೆ ನೀಡುತ್ತಿದೆ ಈ ಆಲಯ. ಅಭಿನವ ಶಂಕರಾಲಯವೆಂದೇ ಹೆಸರಾದ ದೇವಾಲಯ ಸಮುಚ್ಛಯದಲ್ಲಿ ‘ಆಷಾಢ ವೈಭವ’ ಪ್ರತಿ ಶುಕ್ರವಾರದ ವಿಶೇಷ ಮಹೋತ್ಸವ ವಿಜೃಂಭಿಸಲಿದೆ. ಮೈಸೂರಿನಲ್ಲಿ ಆಷಾಢ ಮಾಸ ಎಂದರೆ ಅದಕ್ಕೆ ತನ್ನದೇ ಆದ ವಿಶೇಷತೆ ಇದೆ. ಈ ಮಾಸದ ಪ್ರತಿ ಶುಕ್ರವಾರಗಳಂದು ಅಮ್ಮನವರ ವೈಭವ ನೋಡಿ ಸೇವೆ ಸಮರ್ಪಿಸಲು ಸಾವಿರಾರು ಭಕ್ತರು ಶಂಕರ ಮಠದಲ್ಲಿ ಸಂಗಮಗೊಳ್ಳಲಿದ್ದಾರೆ. ಶಕ್ತಿ ಮಾತೆಗೆ ಆಷಾಢದ ಶುಕ್ರವಾರಗಳಂದು ಅಭಿಷೇಕ, ಚಿತ್ತಾಕರ್ಷಕ ಆಭರಣಗಳ , ಪರಿಮಳ ಪುಷ್ಪಗಳ ಸಮರ್ಪಣೆ, ವೈವಿಧ್ಯಮಯ ಅಲಂಕಾರ ನೆರವೇರಲಿದೆ.
*
* ಆಚರಣೆ ಏನೇನು ? : ಅಗ್ರಹಾರದಲ್ಲಿರುವ ಶಂಕರ ಮಠದಲ್ಲಿ ಶ್ರೀ ಮಹಾಗಣಪತಿ, ಶ್ರೀ ಸತ್ಯನಾರಾಯಣ, ನವಗ್ರಹ, ನಾಗ, ಶ್ರೀ ಆದಿಶಂಕರಾಚಾರ್ಯ, ಜಗದ್ಗುರು ನೃಸಿಂಹ ಭಾರತಿ ಶ್ರೀಗಳ ಸನ್ನಿಧಾನಗಳಿವೆ. ನಿತ್ಯವೂ ದೇವಿಗೆ ಅಷ್ಟೋತ್ತರ, ಸಹಸ್ರನಾಮ, ಕುಂಕುಮಾರ್ಚನೆ, ಶ್ರೀಚಕ್ರ ನವಾವರಣ ಪೂಜೆಯು ಕಲ್ಪೋಕ್ತ ವಿಧಾನದಲ್ಲಿ ನೆರವೇರುತ್ತದೆ. ಮೈಸೂರು ಮಹಾರಾಜರು ಮತ್ತು ಸಮಸ್ತ ಕರುನಾಡಿಗೆ ಮಂಗಳವಾಗಲೆಂದು ದಿನವೂ ಸಂಕಲ್ಪೋಕ್ತ ಪೂಜೆ ನಡೆಯುತ್ತದೆ. ಸಂಜೆ ಆರತಿ, ವಿವಿಧ ಅರ್ಚನೆ, ಪ್ರಸಾದ ವಿನಿಯೋಗವಿರುತ್ತದೆ. ಹುಣ್ಣಿಮೆ ಶ್ರೀ ಸತ್ಯನಾರಾಯಣ ಪೂಜೆ, ಚಂಡಿಕಾಯಾಗ, ಅಮಾವಾಸ್ಯೆ ಮೃತ್ಯುಂಜಯ ಹೋಮ, ರುದ್ರ ಹೋಮ, ಸಂಕಷ್ಟಿ, ಪ್ರದೋಶ ಪೂಜೆ, ಜ್ಯೇಷ್ಠ ಮಾಸದಲ್ಲಿ ವಾರ್ಷಿಕೋತ್ಸವ, ಶಂಕರ ಜಯಂತಿಗೆ 5 ದಿನ ಶಂಕರೋತ್ಸವ ಆಯೋಜನೆಗೊಂಡಿರುತ್ತದೆ. * ಶರನ್ನವರಾತ್ರಿ ಹಬ್ಬ : ಶಾರದೆ ಸನ್ನಿಧಿಯಲ್ಲಿ ನವರಾತ್ರಿಗೆ ಒಂದು ವಿಶೇಷ ಕಳೆ ಇರುತ್ತದೆ. ಮಹಾಲಯ ಅಮಾವಾಸ್ಯೆ ದಿನ ವಾರ್ಷಿಕ ಮಹಾಭಿಷೇಕ, ನವರಾತ್ರಿ ಪಾಡ್ಯದಿಂದ ವಿಜಯದಶಮಿ ತನಕ ನಿತ್ಯವೂ ವಿಭಿನ್ನ ಅಲಂಕಾರ, ಕಾರ್ತಿಕದಲ್ಲಿ ದಿನವೂ ದೀಪೋತ್ಸವ, ಶ್ರಾವಣ ಶುಕ್ರವಾರ ವರಮಹಾಲಕ್ಷ್ಮೀ ವ್ರತ ನೆರವೇರುತ್ತದೆ.
ಎಚ್. ರಾಮಚಂದ್ರನ್ ,ಧರ್ಮಾಧಿಕಾರಿ, ಅಭಿನವ ಶಂಕರಾಲಯ.ಶೃಂಗೇರಿ ಪೀಠದ ಉಭಯ ಶ್ರೀಗಳ ಆದೇಶ ಮತ್ತು ಪರಮ ಅನುಗ್ರಹದಿಂದ ವಿಶ್ವಾವಸು ಸಂವತ್ಸರದ ಆಷಾಢದ ಶುಕ್ರವಾರ ಗಳಂದು ಶ್ರೀ ಶಾರದಮ್ಮನವರ ಸನ್ನಿಧಿಯಲ್ಲಿ ದೇವಿಗೆ ಬೆಳಗ್ಗೆ ಮಹಾ ಸಂಕಲ್ಪ, ಅಭಿಷೇಕ, ಸಂಜೆ ವಿಶೇಷ ಅಲಂಕಾರ ನೆರವೇರಲಿದೆ.ಭಕ್ತರು ಅಷ್ಟೋತ್ತರ ಅರ್ಚನೆ, ತ್ರಿಶತಿ, ಸುವಾಸಿನಿ ಪೂಜೆ, ಕಲ್ಪೋಕ್ತ ಪೂಜೆ, ಹೂವಿನ ಅಲಂಕಾರ, ಚಂಡಿಕಾ ಪಾರಾಯಣ ಇತ್ಯಾದಿ ಸೇವೆ ಸಮರ್ಪಿಸಲು ಶಂಕರಮಠ ಅವಕಾಶ ಕಲ್ಪಿಸಿದೆ. Ramachandra * ಶೇಷಾದ್ರಿ ಭಟ್, ವ್ಯವಸ್ಥಾಪಕದಕ್ಷಿಣಾಮ್ನಾಯ ಶೃಂಗೇರಿ ಮಹಾಸಂಸ್ಥಾನದ 33ನೇ ಯತಿ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮೀಜಿ ಜನಿಸಿದ ಪುಣ್ಯ ಭೂಮಿಕೆಯೇ ಶಾರದೆ ಪೀಠವಾಗಿದೆ. ಇಲ್ಲಿ ಹತ್ತು ಹಲವು ಧಾರ್ಮಿಕ, ಸಾಮಾಜಿಕ ಸೇವಾಕಾರ್ಯ ನೆರವೇರಲು ಶಾರದಾಂಬೆಯೇ ಪ್ರೇರಕ ಶಕ್ತಿ. ಆಷಾಢ ವೈಭವದಲ್ಲಿ ಸಾವಿರಾರು ಭಕ್ತರು ಇಲ್ಲಿ ಸಂಗಮಿಸುವುದನ್ನು ನೋಡುವುದೇ ಅಹೋಭಾಗ್ಯ. SHARADAMBA