ಜಿಲ್ಲೆ

ಗಾಣಗಾಪುರದಲ್ಲಿ ಶೃಂಗೇರಿ ಜಗದ್ಗುರುಗಳ ವಿಜಯಯಾತ್ರೆ; ಶ್ರೀ ಭಾರತೀ ತೀರ್ಥ ಸದನಕ್ಕೆ ಭೂಮಿಪೂಜೆ

ಅಫಜಲಪುರ : ಸನಾತನ ಧರ್ಮ ಪ್ರಚಾರಕ್ಕಾಗಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಕೈಗೊಂಡಿರುವ ವಿಜಯಯಾತ್ರೆ ದೇವಲಗಾಣಗಾಪುರದಲ್ಲಿ ಇತ್ತೀಚೆಗೆ ಸಂಪನ್ನವಾಯಿತು. ಗಾಣಗಾಪುರಕ್ಕೆ ಇದೇ ಮೊದಲ ಬಾರಿಗೆ ಆಗಮಿಸಿದ ಸನ್ನಿಧಾನಂಗಳ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಿತು. ಶ್ರೀದತ್ತಾತ್ರೇಯ ಮಠದಲ್ಲಿ ನಿರ್ಗುಣ ಪಾದುಕೆಗಳಿಗೆ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ನಂತರ ಲೋಕಲ್ಯಾಣಾರ್ಥ ಮಹಾಪೂಜೆ ನೆರವೇರಿಸಿದರು. ಮಠದ ಸಭಾ ಮಂಟಪದಲ್ಲಿ ನಿರ್ಗುಣ ಮಠದ ಪೂಜಾರಿಗಳು, ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಮತ್ತು ಜ್ಯೋತಿ ಪಾಟೀಲ್ ದಂಪತಿಗಳು ಜಗದ್ಗುರುಗಳ ಪಾದುಕೆಗೆ ಪೂಜೆ ನೆರವೇರಿಸಿ ಫಲ,ವಸ್ತ್ರ ಸಮರ್ಪಣೆ ಮಾಡಿದರು. ಬಳಿಕ ಶ್ರೀಗಳು ಭೀಮಾ-ಅಮರ್ಜಾ ಸಂಗಮ ಮತ್ತು ಕಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಶಂಕರ ಮಠದಲ್ಲಿ ಅಸಂಖ್ಯ ಭಕ್ತರು ಜಗದ್ಗುರುಗಳ ಪಾದುಕ ಪೂಜೆ, ಭಿಕ್ಷಾವಂದನೆ, ಫಲ ಸಮರ್ಪಣೆ ಮಾಡಿದರು. ಭಕ್ತರಿಗೆ ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ನಿರ್ಗುಣ ಮಠದ ಪ್ರಸಾದ ಪೂಜಾರಿ, ಪ್ರಿಯಾಂಕ್ ಪೂಜಾರಿ, ವಲ್ಲಭ ಪೂಜಾರಿ, ಸದಾಶಿವ ಪೂಜಾರಿ, ನರಸಿಂಹ ಪೂಜಾರಿ, ಧನಂಜಯ ಪೂಜಾರಿ ಮತ್ತಿತರರಿದ್ದರು.

ಶ್ರೀ ಭಾರತೀ ತೀರ್ಥ ಸದನಕ್ಕೆ ಭೂಮಿಪೂಜೆ

ದೇವಲಗಾಣಗಾಪುರದ ಸಂಗಮ ಕ್ಷೇತ್ರದಲ್ಲಿ ರಾಜಗುರು ಬಿ.ಎಸ್.ದ್ವಾರಕನಾಥ ಗುರೂಜಿ ನಿರ್ಮಿಸಲು ಉದ್ದೇಶಿಸಿರುವ ‘ಜಗದ್ಗುರು ಶ್ರೀ ಭಾರತೀ ತೀರ್ಥ ಸದನ’ಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು. ನೀಲಿನಕ್ಷೆ ವೀಕ್ಷಿಸಿ ಕಾಮಗಾರಿಗೆ ಶುಭ ಹಾರೈಸಿದರು. ಈ ವೇಳೆ ಅನುಗ್ರಹ ಭಾಷಣ ಮಾಡಿದ ಶ್ರೀಗಳು, ಗಾಣಗಾಪುರ ಸಂಗಮ ಕ್ಷೇತ್ರದ ತಪೋ ಭೂಮಿಯಲ್ಲಿ ಪರಿಪೂರ್ಣವಾದ ಸದನ ನಿರ್ಮಾಣವಾಗಲಿ. ನಿತ್ಯ ಪೂಜೆ, ಸಂಗೀತ, ಭಜನೆ, ಕೀರ್ತನೆಗಳು ಜರುಗಲಿ. ಗುರುಪೀಠದ ಪರಂಪರೆಗೆ ದ್ವಾರಕಾನಾಥರ ಸೇವೆ ಸದಾಕಾಲ ಮುಂದುವರೆಯಲಿ ಎಂದರು. 

"ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಹುಬ್ಬಳ್ಳಿಯಲ್ಲಿ ಶಿವಶಕ್ತಿ ಧಾಮವನ್ನು ನಿರ್ಮಿಸಿ ಶೃಂಗೇರಿ ಮಠಕ್ಕೆ ಒಪ್ಪಿಸಿದ್ದಾರೆ. ಅದರ ಪ್ರೇರಣೆಯಿಂದ ನಾನು ಗಾಣಗಾಪುರ ಕ್ಷೇತ್ರದಲ್ಲಿ ‘ಶ್ರೀ ಭಾರತೀ ತೀರ್ಥ ಸದನ’ ನಿರ್ಮಾಣಕ್ಕೆ ಮುಂದಾಗಿದ್ದು, ಇದು ಶೃಂಗೇರಿ ಶಾರದಾ ಪರಂಪರೆಗೆ ಮೀಸಲಾಗಿರಲಿದೆ. ಶ್ರೀ ನರಸಿಂಹ ಸರಸ್ವತಿ ಮಹಾರಾಜರು ನೆಲೆಸಿರುವ ಗಾಣಗಾಪುರವು ಭಕ್ತರ ಸಂಕಷ್ಟಗಳನ್ನು ದೂರ ಮಾಡುವ ತ್ರಿಮೂರ್ತಿ ಸ್ವರೂಪದ ಶ್ರೀ ದತ್ತಾತ್ರೇಯರು ನೆಲೆಸಿರುವ ಅಪರೂಪ ಕ್ಷೇತ್ರ."                                - ರಾಜಗುರು ಬಿ.ಎಸ್.ದ್ವಾರಕನಾಥ