ಜಿಲ್ಲೆ

ಅರಣ್ಯ ಕಾನೂನು, ರಾಷ್ಟ್ರೀಯ ಉದ್ಯಾನ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯಿಸಿ 30ರಂದು ಸರ್ವಪಕ್ಷಗಳ ಪಾದಯಾತ್ರೆ

Chikkamagaluru

ಶೃಂಗೇರಿ: ಮಲೆನಾಡಿನ ನಿವಾಸಿಗಳಿಗೆ ತೊಂದರೆಯಾಗಿರುವ ವಿವಿಧ ಅರಣ್ಯ ಕಾನೂನು, ಯೋಜನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನ.30ರಂದು ನೆಮ್ಮಾರಿನಿಂದ ತನಿಕೋಡು ಗೇಟ್​ವರಗೆ ಸರ್ವಪಕ್ಷಗಳಿಂದ ಪಾದಯಾತ್ರೆ ಮಾಡಿ ನಂತರ ತನಿಕೋಡು ಗೇಟ್​ನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ.

ಪಟ್ಟಣದ ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಅಂದು ಬೆಳಗ್ಗೆ 10 ಗಂಟೆಗೆ ನೆಮ್ಮಾರಿನಿಂದ ತನಿಕೋಡು ಗೇಟ್​ವರೆಗೆ ತಾಲೂಕಿನ ವಿವಿಧ ಸಂಘಟನೆ, ಸಂಸ್ಥೆಗಳು, ಪಕ್ಷಗಳಿಂದ ಪಾದಯಾತ್ರೆ ನಡೆಯಲಿದೆ.

ಸಾಮಾಜಿಕ ಕಾರ್ಯಕರ್ತ ಎ.ಎಸ್.ನಯನ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ದಿನೇಶ್ ಹೆಗಡೆ ಅವರನ್ನು ಸರ್ವಪಕ್ಷಗಳ ಸಮಿತಿ ಸಂಚಾಲಕರನ್ನಾಗಿ ನೇಮಕ ಮಾಡಲಾಯಿತು.

ಸಂಘಟಿತ ಹೋರಾಟ ಅಗತ್ಯ: ತಾಲೂಕಿನಲ್ಲಿ ಹಲವು ಬಾರಿ ಜನಸಂಪರ್ಕ ಸಭೆ ನಡೆದರೂ ಈ ಭಾಗದ ಒತ್ತುವರಿ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸಿಲ್ಲ. ತಾಲೂಕಿನಲ್ಲಿ ವಸತಿಹೀನರ ಸಂಖ್ಯೆ ಹೆಚ್ಚಾಗಿದೆ. ಅವರಿಗೆ ನಿವೇಶನ ನೀಡುವ ಅವಕಾಶಗಳಿಗೆ ಅರಣ್ಯ ಇಲಾಖೆ ಕಾನೂನುಗಳು ತೊಡಕಾಗಿವೆ. ಸಮಸ್ಯೆ ಪರಿಹಾರಕ್ಕಾಗಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ತಾಪಂ ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್ ಸಲಹೆ ಮಾಡಿದರು.