ಶೃಂಗೇರಿ: ಶೃಂಗೇರಿ ಶಾರದಾಪೀಠದ 36ನೇ ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ಅವರ 75ನೇ ವರ್ಧಂತಿ ಮಹೋತ್ಸವದ ಕಾರ್ಯಕ್ರಮದಡಿ ಧಾರ್ಮಿಕ ಕಾರ್ಯಕ್ರಗಳಿಗೆ ಚಾಲನೆ ನೀಡಲಾಗಿದ್ದು ಏ.11 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನರಸಿಂಹವನದ ಶ್ರೀಭಾರತೀ ತೀರ್ಥ ನಗರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ. ಶ್ರೀಮಹಾಗಣಪತಿ ಆರಾಧನೆ ಪ್ರಯುಕ್ತ ಲಕ್ಷಮೋದಕ ಗಣಪತಿ ಹೋಮ, ಶ್ರೀಶಿವಾರಾಧನೆ ಅಂಗವಾಗಿ ಅತಿರುದ್ರಮಹಾಯಾಗ, 75 ಲಕ್ಷ ಪಂಚಾಕ್ಷರೀ ಮಹಾಮಂತ್ರ ಜಪ, ಶ್ರೀ ಅಂಬಿಕಾ ಆರಾಧನೆ ಪ್ರಯುಕ್ತ ಸಹಸ್ರ ಚಂಡೀ ಮಹಾಯಾಗ, ಅಯುತ ಶ್ರೀ ಸೂಕ್ತಜಪ, ಸರಸ್ವತಿ ಮಂತ್ರ ಅನುಷ್ಠಾನ, ದೇವಿ ಮಹಾಮಂತ್ರ ಜಪ, ಅಕ್ಷರ ಲಕ್ಷ್ಮೀ ಶ್ರೀವಿದ್ಯಾ ಜಪ ಅನುಷ್ಠಾನ, ಅಷ್ಟೋತ್ತರ ಶತ ಲಲಿತೋಪಾಖ್ಯಾನ ಪಾರಾಯಣ ನಡೆಯಲಿದೆ.
ಶ್ರೀಮಹಾವಿಷ್ಣು ಆರಾಧನೆ ಸಲುವಾಗಿ ಶ್ರೀಲಕ್ಷ್ಮೀನಾರಾಯಣ ಹೃದಯ ಪಾರಾಯಣ, ಶ್ರೀನರಸಿಂಹ, ಶ್ರೀ ರಾಮ, ಶ್ರೀ ಕೃಷ್ಣ, ಶ್ರೀ ಹಯಗ್ರೀವ ಇತರೆ ಮೂಲಮಂತ್ರ ಜಪ ಮತ್ತು ಹೋಮ, ಶ್ರೀ ಸೂರ್ಯ ಆರಾಧನೆ ಪ್ರಯುಕ್ತ ದ್ವಾದಶ ಶತ ಪಾರಾಯಣ, ಸೂರ್ಯ ನಮಸ್ಕಾರ, ಆದಿತ್ಯ ಹೃದಯ ಮತ್ತು ಸೂರ್ಯ ಕವಚ ದ್ವಾದಶ ಸಹಸ್ರ ಪಾರಾಯಣ ನೆರವೇರಲಿದೆ. ವೇದ ಹವನ ಧಾರ್ಮಿಕ ಕಾರ್ಯಕ್ರಮದಲ್ಲಿ ಋಗ್ ವೇದ ಸಂಹಿತಾ, ಕೃಷ್ಣ ಯರ್ಜುವೇದ, ಶುಕ್ಲ ಯರ್ಜುವೇದ, ಸಾಮವೇದ ಸಂಹಿತಾ ಹವನಗಳು, ಸಂಪೂರ್ಣ ಅಥರ್ವಣ ವೇದ ಪಾರಾಯಣ, ಶ್ರೀ ಸುಂದರಕಾಂಡ ಪಾರಾಯಣ, ಅಕ್ಷರ ಲಕ್ಷ ಗಾಯತ್ರಿ ಜಪ ನಡೆಯಲಿದೆ.
ಜಗದ್ಗುರು ಶ್ರೀವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿ ಅವರ ಆಗ್ರಹದಂತೆ ಶ್ರೀ ಜನಾರ್ಧನ ಸ್ವಾಮಿ ದೇವಾಲಯದ ಸಮೀಪ ನಾನಾಪ್ರಾಂತ್ಯಗಳಿಂದ ಆಗಮಿಸುವ ಭಕ್ತರು ಮಾ.30 ರಿಂದ ಏಪ್ರಿಲ್11ರವರೆಗೆ ಬೆಳಗ್ಗೆ 9.30ರಿಂದ 12.30ರ ವರೆಗೆ ಶ್ರೀ ರಾಮಜಪ ಪಠಿಸಲಿದ್ದಾರೆ.
ಜಗದ್ಗುರು ಶ್ರೀ ಭಾರತೀತೀರ್ಥ ಮಹಾ ಸ್ವಾಮೀಜಿ ಅವರ ವರ್ಧಂತಿ ಮಹೋತ್ಸವ ಏ.3 ರಂದು ಗುರುನಿವಾಸದಲ್ಲಿ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಹಿರಿಯ ಶ್ರೀಗಳ ದರ್ಶನ, ಮಧ್ಯಾಹ್ನ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ, ಸಂಜೆ ಗುರುನಿವಾಸದಲ್ಲಿ ಗುರುವಂದನಾ ಕಾರ್ಯಕ್ರಮದ ನಂತರ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ.