ಮೈಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಕುವೆಂಪುನಗರದಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಇಲವಾಲದ ಸಮುದಾಯ ಭವನದಲ್ಲಿ ಭಾನುವಾರ ಮಹಿಳಾ ವಿಚಾರಗೋಷ್ಠಿ, ಸದಸ್ಯರಿಗೆ ವಿನೋದ ಆಟೋಟ ಆಯೋಜಿಸಲಾಗಿತ್ತು.
ರಂಗಾಯಣದ ಕಲಾವಿದೆ ಸರೋಜಾ ಹೆಗಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ, ಎಲ್ಲರೊಂದಿಗೆ ಹೊಂದಾಣಿಕೆ ಸೇರಿದಂತೆ ಇನ್ನಿತರ ವಿಷಯ ಕುರಿತು ತಿಳಿಸಿಕೊಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನವಿಕಾಸ ಮೈಸೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಮೂಕಾಂಬಿಕಾ ಅವರು, ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮ, ಮಹಿಳಾ ಸಬಲೀಕರಣ, ಮಾಸಾಶನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ವಿವರ ನೀಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜಿಲ್ಲಾ ಹಿರಿಯ ನಿರ್ದೇಶಕ ಡಾ.ವಿಜಯ ಕುಮಾರ್ ನಾಗನಾಳ ಅವರು ಯೋಜನೆಯ ಕಾರ್ಯಕ್ರಮಗಳು ಸದಸ್ಯರಲ್ಲಿ ಅರಿವು ಮೂಡಿಸುವ ವ್ಯವಹಾರ ಜ್ಞಾನ, ಸಂಘಗಳಿಂದ ಆಗುವ ಉಪಯೋಗಗಳು, ಶಿಸ್ತು ಮಕ್ಕಳ ಶಿಕ್ಷಣದಲ್ಲಿ ತಂದೆ, ತಾಯಿಯಂದಿರು ವಹಿಸಬೇಕಾದ ಜವಾಬ್ದಾರಿಗಳನ್ನು ತಿಳಿಸಿಕೊಟ್ಟರು.
ಯೋಜನೆ ಕುರಿತು ಕಿರು ಪರಿಚಯವನ್ನು ಮಾಡಿಕೊಟ್ಟರು. ಸದಸ್ಯರಿಗೆ ಉಳಿತಾಯದ ಬಗ್ಗೆ ಸ್ವಉದ್ಯೋಗದ ಬಗ್ಗೆ ಮಾಹಿತಿ, ಸೈಬರ್ ಅಪರಾಧದಿಂದ ಆಗುವ ಮೋಸದ ಬಗ್ಗೆ ಸದಸ್ಯರಿಗೆ ಮನವರಿಕೆ ಮಾಡಿಕೊಟ್ಟರು.
ಮೇಗಳಾಪುರ-ಇಲವಾಲ ಒಕ್ಕೂಟದ ಅಧ್ಯಕ್ಷೆ ವಿದ್ಯಾಶ್ರೀ, ಮೈಸೂರು ತಾಲೂಕಿನ ಯೋಜನಾಧಿಕಾರಿ ಶಕುಂತಲಾ, ಶಾಲಾ ಮುಖ್ಯ ಶಿಕ್ಷಕರಾದ ಮಹದೇವ, ನಿರ್ಮಲಾ ಇತರರು ಇದ್ದರು.
ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆ, ಆಟೋಟ ಸ್ಪರ್ಧೆ, ಜಾನಪದ ನೃತ್ಯ ಮತ್ತು ಕೋಲಾಟ ಮತ್ತು ಜ್ಞಾನ ವಿಕಾಸ ಮಾದರಿ ಗುರುತಿಸುವಿಕೆ ಸೇರಿದಂತೆ ನಾನಾ ವಿನೋದ ಆಟಗಳಲ್ಲಿ ಸದಸ್ಯರು ಸಂಭ್ರಮದಿಂದ ಭಾಗವಹಿಸಿದ್ದರು.