ಜಿಲ್ಲೆ

ಹುಬ್ಬಳ್ಳಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ, ಶ್ರೀಗೋವಿಂದನ ಸ್ಮರಿಸುತ್ತ ರಥ ಎಳೆದ ಭಕ್ತರು

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಮಾಜದ ವತಿಯಿಂದ ಶ್ರೀಕೃಷ್ಣ ಜಯಂತಿ ಅಂಗವಾಗಿ ಶ್ರೀಕೃಷ್ಣ ಲೀಲೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು.

ಶ್ರೀಕೃಷ್ಣ ಲೀಲೋತ್ಸವ ಮೆರವಣಿಗೆಯು ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಿಂದ ಹೊರಟು ಬಾಳಿಗಾ ಕ್ರಾಸ್ ತಲುಪಿ ವಾಪಸ್ ಕಲ್ಯಾಣ ಮಂಟಪ ಬಳಿಯ ಕೃಷ್ಣ ದೇವಸ್ಥಾನಕ್ಕೆ ಆಗಮಿಸಿತು.

ಸಂಜೆ ಗೋಧೂಳಿ ಸಮಯದಲ್ಲಿ ಶ್ರೀಕೃಷ್ಣ ಲೀಲೋತ್ಸವದ ರಥವು ಬೀದಿಯಲ್ಲಿ ಸಾಗುತ್ತಿದ್ದಂತೆ ಶ್ರೀಗೋವಿಂದನ ನಾಮ ಸ್ಮರಣೆ ಮಾಡುತ್ತ ಭಕ್ತರು ರಥ ಎಳೆದರು.

ವಿವಿಧ ವಾದ್ಯಮೇಳ, ಭಕ್ತರ ನೃತ್ಯ, ಹುಲಿವೇಷ, ಬೊಂಬೆಕುಣಿತ ಇತ್ಯಾದಿಗಳು ಮೆರವಣಿಗೆಗೆ ಮೆರಗು ನೀಡಿದವು.

ಕಲ್ಯಾಣ ಮಂಟಪದಲ್ಲಿ ಮೊಸರು ಗಡಿಗೆ ಒಡೆಯುವ ಸಾಹಸ ಕಾರ್ಯಕ್ರಮ ಮಕ್ಕಳು, ಮಹಿಳೆಯರನ್ನು ಸೆಳೆಯಿತು. ನಂತರ ನಡೆದ ಸಮಾರಂಭದಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಯಿತು.

ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಪುರಸ್ಕಾರ ನೀಡಲಾಯಿತು. ಭಾರ್ಗವ ಸೇವಾದಳದ ವತಿಯಿಂದ ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಭಾರ್ಗವ ಸೇವಾ ದಳ ಮತ್ತು ನೇತ್ರಾವತಿ ಮಂಡಳಿಯ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ಸಮಾಜದ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಅನಂತರಾಜ ಭಟ್, ವಾದಿರಾಜ ಓಕಡೆ, ರಾಮಚಂದ್ರ ಉಪಾಧ್ಯಾಯ, ಶ್ರೀಕಾಂತ ಕೆಮ್ತೂರ, ಇತರರು ಉಪಸ್ಥಿತರಿದ್ದರು.