ಬೆಳ್ತಂಗಡಿ: ತಾಲೂಕಿನ ಗಡಿ ಪ್ರದೇಶ ಎಳನೀರು-ಸಂಸೆ ಭಾಗದ ಜಲಪಾತದ ಬಳಿ ಜ.25ರಂದು ಭಾರಿ ಗುಡ್ಡ ಕುಸಿತ ಉಂಟಾಗಿದ್ದು, ಕುಸಿದು ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ಶ್ರೀಧರ್ಮಸ್ಥಳ ವಿಪತ್ತು ಸೇವಾ ಘಟಕದ ಸ್ವಯಂಸೇವಕರು ಭಾಗವಹಿಸಿದ್ದಾರೆ.
ಘಟನೆಯಲ್ಲಿ ಮಣ್ಣಿನೊಳಗೆ ಹೂತು ಹೋದವನನ್ನು ಮೇಲೆತ್ತುವ ಕಾರ್ಯಾಚರಣೆ ಸಲುವಾಗಿ ಸ್ಥಳಕ್ಕೆ ಯಾವುದೇ ಯಂತ್ರಗಳನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿರಲಿಲ್ಲ. ವಾಹನಗಳ ಸಂಚಾರವೂ ಇರದ ದುರ್ಗಮಸ್ಥಳ ಅದಾಗಿದೆ. ಆ ಮಾರ್ಗದಲ್ಲಿ ಮನುಷ್ಯರ ಓಡಾಟವೂ ವಿರಳವಾಗಿದೆ. ಏರಿಳಿತಗಳನ್ನು ಹೊಂದಿರುವ ದುರ್ಗಮ ಮಾರ್ಗದಲ್ಲಿ ಸಾಗಬೇಕಿದೆ.
ಗುಡ್ಡ ಜರಿದ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ವಿಪತ್ತು ನಿರ್ವಹಣಾ ಘಟಕದ ಸದಸ್ಯ ರತನ್ ಹಾಗೂ ವಿನಯಚಂದ್ರ ತಕ್ಷಣ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಗೆ ಸ್ವಯಂಸೇವಕರ ಅಗತ್ಯತೆ ಕುರಿತು ವಿಪತ್ತು ನಿರ್ವಹಣಾ ಯೋಜನಾಧಿಕಾರಿಗೆ ಕರೆ ಮಾಡಿದ್ದರು. ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ ಸಲಹೆಯಂತೆ ಘಟನೆ ನಡೆದ ಸ್ಥಳಕ್ಕೆ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಭೇಟಿ ನೀಡಿದ್ದಾರೆ.
ವಿಪತ್ತು ನಿರ್ವಹಣಾ ಘಟಕ ನಾವೂರು ವಲಯದ ಸ್ವಯಂಸೇವಕ ರತನ್ ಹಾಗೂ ವಿನಯಚಂದ್ರ, ಬೆಳ್ತಂಗಡಿ ವಲಯ ಸಂಯೋಜಕ ಜಗನ್ನಾಥ, ಬೆಳಾಲು ವಲಯದ ಸ್ವಯಂಸೇವಕ, ಮುಳುಗು ತಜ್ಞ ಹರೀಶ್ ಬೆಳಾಲ್, ಧರ್ಮಸ್ಥಳ ವಲಯದ ಸ್ವಯಂಸೇವಕ ಸ್ವಸ್ತಿಕ್ ಕನ್ಯಾಡಿ, ಅಳದಂಗಡಿ ಘಟಕದ ಸಂಯೋಜಕ ಶ್ರೀಕಾಂತ್ ಪಟವರ್ಧನ ಸ್ಥಳಕ್ಕೆ ಭೇಟಿ ನೀಡಿ ತಮ್ಮ ತಂಡದೊಂದಿಗೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ(ಎಸ್‌ಡಿಆರ್‌ಎಫ್) ಅಗ್ನಿಶಾಮಕದಳ, ಅರಣ್ಯ ಇಲಾಖೆ ಸಿಬ್ಬಂದಿ, ಆರಕ್ಷಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು ಅವರೊಂದಿಗೆ ಶ್ರೀ ಧರ್ಮಸ್ಥಳ ವಿಪತ್ತು ಸೇವಾ ಘಟಕದ ಸ್ವಯಂಸೇವಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಬೆಳ್ತಂಗಡಿ ಜನಜಾಗೃತಿ ವೇದಿಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ ತಿಳಿಸಿದ್ದಾರೆ.