ಅಳವಂಡಿ: ಸಮೀಪದ ಮುರ್ಲಾಪುರ ಗ್ರಾಮದಲ್ಲಿ 134 ವರ್ಷಗಳಿಂದ ನಡೆಯುತ್ತಿರುವ ಶ್ರೀದೇವಿ ಪುರಾಣ ಕಾರ್ಯಕ್ರಮ ಅ.15 ರಂದು ಮಂಗಲವಾಗಲಿದೆ.
ಇದನ್ನೂ ಓದಿ:ಅಡ್ಡಪಲ್ಲಕ್ಕಿ ಮೆರವಣಿಗೆ ಅದ್ದೂರಿ
ಗುರುವಾರ ಬೆಳಗ್ಗೆ ಮುಂಡರಗಿಯ ನಾಡೋಜ ಡಾ.ಅನ್ನದಾನೇಶ್ವರ ಮಹಾಸ್ವಾಮೀಜಿ ಅವರಿಂದ ಷಟಸ್ಥಲ ಧ್ವಜಾರೋಹಣ, ಮಹಿಳೆಯರ ಕಳಸ, ಕುಂಭ ಹಾಗೂ ಜನಪದ ವಾದ್ಯಮೇಳದೊಂದಿಗೆ ಹೂಗಳಿಂದ ಅಲಂಕರಿಸಿದ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳು ಹಾಗೂ ಶ್ರೀದೇವಿಯ ಮೂರ್ತಿ ಅಡ್ಡಪಲ್ಲಕ್ಕಿ ಮೆರವಣಿಗೆ. ನಂತರ ಪುರಾಣ ಮಂಗಲ, ಧಾರ್ಮಿಕ ಸಭೆ ನಡೆಯಲಿದೆ. ಡಾ.ಅನ್ನದಾನೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ನರಸಾಪುರದ ಡಾ.ವೀರೇಶ್ವರ ಸ್ವಾಮೀಜಿ, ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಪ್ರಮುಖರಾದ ಸಿ.ವಿ.ಚಂದ್ರಶೇಖರ, ಟಿ.ಜಿ.ಹಿರೇಮಠ, ಪ್ರವೀಣಸ್ವಾಮಿ ಹುಲಕಂತಿಮಠ, ಉಪನ್ಯಾಸಕ ಎಸ್.ಬಿ.ಕರಿಭರಮನಗೌಡರ ಆಗಮಿಸಲಿದ್ದಾರೆ. ಸಂಜೆ ರಸಮಂಜರಿ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆ ನಡೆಸಲಿದೆ.
ಇತಿಹಾಸ: 134 ವರ್ಷಗಳ ಹಿಂದೆ ಪ್ಲೇಗ್, ಕಾಲರಾದಂಥ ಸಾಂಕ್ರಾಮಿಕ ಕಾಯಿಲೆಗಳು ಬಂದು ಜನರು ಊರನ್ನು ತೊರೆದು ಅಡವಿ, ಜಮೀನುಗಳಲ್ಲಿ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದರು. ಮುಂಡರಗಿಯ ಅನ್ನದಾನೇಶ್ವರ ಮಠದ ಅಂದಿನ ಜಗದ್ಗುರು (ಸೊರಟೂರು) ಸ್ವಾಮೀಜಿ ಆಶಿರ್ವಚನ ನೀಡಲು ತಳಕಲ್ ಗ್ರಾಮಕ್ಕೆ ಎತ್ತಿನ ಬಂಡಿಯಲ್ಲಿ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಕವಲೂರು ಮಾರ್ಗವಾಗಿ ತೆರಳುವಾಗ ಭಾರಿ ಮಳೆಯಿಂದ ಬಂಡಿಯ ಚಕ್ರ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ರಾತ್ರಿ ವೇಳೆ ಜನರು ಕಾಣುತ್ತಿರಲಿಲ್ಲ. ಸ್ವಲ್ಪ ದೂರದಲ್ಲಿ ಮಿನುಗುತ್ತಿದ್ದ ದೀಪಗಳನ್ನು ಕಂಡು ಅಲ್ಲಿಗೆ ತೆರಳಿ ಬಂಡಿ ಮೇಲೆತ್ತುವವರೆಗೆ ಗ್ರಾಮಸ್ಥರ ಬಳಿ ಇದ್ದರು. ಆಗ ಮುರ್ಲಾಪುರ ಗ್ರಾಮಸ್ಥರು ಊರಿಗಂಟಿದ ಕಾಯಿಲೆ ಪರಿಹರಿಸುವಂತೆ ವಿನಂತಿಸಿದಾಗ ಶ್ರೀಗಳು ಗ್ರಾಮದಲ್ಲಿ ಪ್ರತಿ ವರ್ಷ ಶ್ರೀದೇವಿ ಪುರಾಣ ಪ್ರವಚನ ಹಾಗೂ ಜಂಗಮೋತ್ಸವ ನಡೆಸುವಂತೆ ಹೇಳಿದರು. ಪುರಾಣ ಆರಂಭವಾದಾಗಿನಿಂದ ಗ್ರಾಮದಲ್ಲಿ ಶಾಂತಿ ನೆಲೆಸಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.