ಗಂಗಾವತಿ: ನಗರದ ಆರಾಧ್ಯದೈವ ಶ್ರೀಚನ್ನಬಸವ ಶಿವಯೋಗಿಗಳ 78ನೇ ವರ್ಷದ ಪುಣ್ಯಸ್ಮರಣೋತ್ಸವ ನಿಮಿತ್ತ ಸರ್ವಾಲಂಕೃತ ಜೋಡು ರಥೋತ್ಸವ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ಮಠದಲ್ಲಿ ತಿಂಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಪುರಾಣ ಪ್ರವಚನ ಹಮ್ಮಿಕೊಳ್ಳಲಾಗಿತ್ತು. ಪುಣ್ಯಸ್ಮರಣೋತ್ಸವ ನಿಮಿತ್ತ ಕರ್ತೃ ಗದ್ದುಗೆ ಮತ್ತು ಶಿಲಾಮೂರ್ತಿಗೆ ವಿಶೇಷ ಪೂಜೆ, ಪುರಾಣ ಮಂಗಲ, ರುದ್ರಾಭಿಷೇಕ ಮತ್ತು ವಿಶೇಷ ಹೂವಿನ ಅಲಂಕಾರ ಸೇವೆ ನೆರವೇರಿದ್ದು, ಬೆಳಗ್ಗೆ ಮಡಿತೇರು ಏಳೆಯಲಾಯಿತು. ಪುರಾಣ ಪ್ರವಚನ ಮಹಾಮಂಗಲ ಕಾರ್ಯ ನಡೆದಿದ್ದು, ಪುರಾಣ ಪ್ರವಚನಕಾರರು, ಕಲಾವಿದರು ಮತ್ತು ಕೋಚಿಂಗ್ ಸೆಂಟರ್‌ನಲ್ಲಿ ಉಚಿತ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸರ್ವಾಲಂಕೃತ ಜೋಡು ರಥೋತ್ಸವ ಶ್ರೀಮಠದಿಂದ ಬಸವಣ್ಣ ವೃತ್ತದ ಬಳಿಯ ಪಾದಗಟ್ಟೆವರೆಗೆ ಅಪಾರ ಭಕ್ತರ ಸಮ್ಮುಖದಲ್ಲಿ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ನೂಕುನುಗ್ಗಲು: ಶ್ರೀಮಠಕ್ಕೆ ಕಾರಟಗಿ, ಕನಕಗಿರಿ, ಹಣವಾಳ, ಮುಕ್ಕಂಪಿ, ಹೇಮಗುಡ್ಡ ಮತ್ತಿತರೆಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದು, ದೀಡು ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು. ಶಿಲಾಮೂರ್ತಿ ಸಾರ್ವಜನಿಕ ದರುಶನಕ್ಕಾಗಿ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದು, ಜನಜಂಗುಳಿ ಹೆಚ್ಚಿದ್ದರಿಂದ ಕರ್ತೃ ಗದ್ದುಗೆ ದರ್ಶನ ನಿರ್ಬಂಧಿಸಲಾಗಿತ್ತು. ಸಿಬಿಎಸ್ ಕಲ್ಯಾಣ ಮಂಟಪ ಮತ್ತು ಆವರಣದಲ್ಲಿ ದಾಸೋಹ ವ್ಯವಸ್ಥೆ ಮಾಡಲಾಗಿದ್ದು, 20 ಕೌಂಟರ್ ತೆರೆಯಲಾಗಿತ್ತು. ಬೂಂದಿ, ಬದನೆಪಲ್ಯ, ಹಿಟ್ಟಿನ ಜುಣುಕ, ಅನ್ನ, ಸಾಂಬಾರ್ ವಿತರಿಸಲಾಯಿತು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು. ಶಾಸಕ ಗಾಲಿ ಜನಾರ್ದನ ರೆಡ್ಡಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಶ್ರೀಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿ ಟ್ರಸ್ಟಿಗಳಾದ ಹೊಸಳ್ಳಿ ಶಂಕರಗೌಡ, ಸಿದ್ದನಗೌಡ, ಕೆ.ಚನ್ನಬಸಯ್ಯಸ್ವಾಮಿ, ಚಂದ್ರೇಗೌಡ ಪೊ.ಪಾಟೀಲ್ ಭಾಗವಹಿಸಿದ್ದರು.
ಗಣ್ಯರು ಭಾಗಿ: ರಥೋತ್ಸವದಲ್ಲಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ನಗರಸಭೆ ಸದಸ್ಯ ರಾದ ವಾಸುದೇವ ನವಲಿ, ರಮೇಶ ಚೌಡ್ಕಿ, ಮುಖಂಡರಾದ ಬಸವರಾಜ ಸ್ವಾಮಿ ಮಳೀಮಠ, ರುದ್ರೇಶ ಡ್ಯಾಗಿ, ಕಾಶೀನಾಥ ಚಿತ್ರಗಾರ, ವೀರಭದ್ರಪ್ಪ ನಾಯಕ, ಶ್ರವಣಕುಮಾರ ರಾಯ್ಕರ್, ದುರುಗಪ್ಪ ದಳಪತಿ ಇತರರಿದ್ದರು.