ಚಿಕ್ಕಮಗಳೂರು: ಶ್ರೀಬೇರುಗಂಡಿ ಬೃಹನ್ಮಠದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಗೋಪುರ ಕಲಸಾರೋಹಣ, ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ದ್ವಾದಶ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ಹಾಗೂ ಲೋಕಶಾಂತಿಗಾಗಿ ಹೋಮ ಹವನ ಮತ್ತು ಧರ್ಮ ಜಾಗೃತಿ ಕಾರ್ಯಕ್ರಮ ವಿಜೃಂಭಣೆಯಿಂದ ಆರಂಭಗೊಂಡಿದೆ.
ಗುರುವಾರ ಮಧ್ಯಾಹ್ನ ೩ ಗಂಟೆಗೆ ಮಠದ ಆವರಣದಲ್ಲಿ ಗಂಗಾಪೂಜೆ, ಸಂಕಲ್ಪ-ಪುಣ್ಯಾಹ, ಗಣಪತಿ-ನಂದಿ-ಅಷ್ಟಲಕ್ಷ್ಮೀ ಕಳಸ, ಪಂಚ ಕಳಸ, ಏಕಾದಶರುದ್ರ ಕಳಸ, ಮಹಾಮೃತ್ಯುಂಜಯ ಕಳಸ, ದುರ್ಗಾ ಕಳಸ, ದಶದಿಲ್ಪಾಲಕರ ಕಳಸ ಪೂಜೆ, ಗಣಹೋಮ, ಆಯುಷ್ಯ ಹೋಮ, ಜಯಾದಿ ಹೋಮ, ರಕ್ಷಘ್ನ ಹೋಮ ನೆರವೇರಿದವು.
ಕಾರ್ಯಕ್ರಮದ ಅಂಗವಾಗಿ ಮಠಕ್ಕೆ ಆಗಮಿಸಿದ ಶ್ರೀರಂಭಾಪುರಿ ಶ್ರೀಗಳನ್ನು ಹಾಗೂ ನೋಣವಿನಕೆರೆ ಸೋಮೆಕಟ್ಟೆ ಶ್ರೀಕಾಡಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗಿ ಸ್ವಾಮೀಜಿಗಳನ್ನು ಪೂರ್ಣಕುಂಭದೊಂದಿಗೆ ಮಂಗಳವಾಧ್ಯಗಳ ಸಹಿತ ಸ್ವಾಗತ ಕೋರಲಾಯಿತು.
ಶುಕ್ರವಾರ ಪ್ರಾಥಃಕಾಲದಲ್ಲಿ ನೊಣವಿನಕೆರೆ ಸೋಮೇಕಟ್ಟೆ ಶ್ರೀಕಾಡಸಿದ್ಧೇಶ್ವರ ಸಂಸ್ಥಾನಮಠದ ಶ್ರೀ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಯ ಗದ್ದುಗೆಗೆ ಏಕಾದಶ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಅಲಂಕಾರ ಪೂಜೆ, ರಾಜೋಪಚಾರ ಮಹಾಮಂಗಳಾರತಿ ಹಾಗೂ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಗಳ ದ್ವಾದಶ ಪಟ್ಟಾಧಿಕಾರ ಸಂಭ್ರಮ ಅಂಗವಾಗಿ ಮಂಗಲಾಭಿಷೇಕ, ಪುಣ್ಯಾಧಿ ಸ್ನಾನ ಕಾರ್ಯಕ್ರಮ ಜರುಗಲಿವೆ.
ಮೇ ೨ರಂದು ಬೆಳಗ್ಗೆ ೧೧ ಗಂಟೆಗೆ ಮಠದ ಆವರಣದಲ್ಲಿ ಧರ್ಮ ಜಾಗೃತಿ ಸಭೆ ನಡೆಯಲಿದೆ. ಈ ಸಭೆಯ ಸಾನ್ನಿಧ್ಯವನ್ನು ಶ್ರೀ ರಂಭಾಪುರಿ ಪೀಠದ ಶ್ರೀ ಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ. ನೊಣವಿನಕೆರೆ ಶ್ರೀಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಕಾರ್ಯಕ್ರಮವನ್ನು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಸಭಾಪತಿ ಎಂ.ಕೆ ಪ್ರಾಣೇಶ್, ಶಾಸಕರಾದ ಎಚ್.ಡಿ ತಮ್ಮಯ್ಯ, ನಯನ ಮೋಟಮ್ಮ, ಮಾಜಿ ಶಾಸಕರಾದ ಸಿ.ಟಿ ರವಿ, ಎಂ.ಪಿ ಕುಮಾರಸ್ವಾಮಿ, ಮಾಜಿ ಎಂ.ಎಲ್.ಸಿ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಪ್ರಮುಖರಾದ ಎಚ್.ಎಂ.ಲೋಕೇಶ್, ವೀರರಾಜಗೌಡ, ಮಹೇಶ್.ಕೆ.ಎಸ್, ಶಿವಸ್ವಾಮಿ, ಧೃವಕುಮಾರ್, ಜಿ.ಎಂ.ರಾಜಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ.