ಹುಬ್ಬಳ್ಳಿ: ಅಖಿಲ ಭಾರತ ಮಾಧ್ವ ಮಹಾಮಂಡಲ ಉಡುಪಿ ಕೇಂದ್ರ ಕಚೇರಿ ಮತ್ತು ಹುಬ್ಬಳ್ಳಿ ಶಾಖೆ ಆಶ್ರಯದಲ್ಲಿ ಅ. 11 ಹಾಗೂ 12ರಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ಷಷ್ಟ್ಯಬ್ದ ಅಭಿವಂದನಾ, ಸಂತ ಸಂಗಮ ಹಾಗೂ ಪಂ. ಪಂಢರೀನಾಥಾಚಾರ್ಯ ಗಲಗಲಿ ಅವರ ಜನ್ಮ ಶತಮಾನೋತ್ಸವ ಸಮಾರಂಭ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದೆ ಎಂದು ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 11ರಂದು ಮಧ್ಯಾಹ್ನ 3ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಉದ್ಘಾಟಿಸುವರು ಎಂದರು.
ಮಧ್ಯಾಹ್ನ 3.30 ರಿಂದ 5.30 ರವರೆಗೆ ನಿತ್ಯಕರ್ವನುಷ್ಠಾನ-ಸಮಸ್ಯೆ ಮತ್ತು ಪರಿಹಾರ ವಿಷಯದ ಕುರಿತು ಸಂವಾದ ಮತ್ತು ಸಾರ್ವಜನಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಎಚ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಜಯತೀರ್ಥಾಚಾರ್ಯ ಹುಂಡೇಕಾರ, ಭೀಮಸೇನಾಚಾರ್ಯ ಮಳಗಿ, ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ, ರವಿ ಆಚಾರ್ಯ ಮತ್ತಿಹಳ್ಳಿ, ಮಾತರಿಶ್ವಾಚಾರ್ಯ, ಅಕ್ಷಯ ಉಡುಪ ಸೇರಿ ಇತರರು ಸಂವಾದದಲ್ಲಿ ಪಾಲ್ಗೊಳ್ಳುವರು ಎಂದರು.
ಸಂಜೆ 5.30 ರಿಂದ 7.30 ರವರೆಗೆ ವಿದ್ವಾನ್ ರಘೊತ್ತಮಾಚಾರ್ಯ ನಾಗಸಂಪಿಗೆ, ವಿದ್ವಾನ್ ಧೂಳಖೇಡ ನಾರಾಯಣಾಚಾರ್ಯ, ವಿದ್ವಾನ್ ಸತ್ಯಮೂರ್ತಿ ಆಚಾರ್ಯ, ವಿದ್ವಾನ್ ಸಮೀರಣಾಚಾರ್ಯ ಕಂಠಪಲ್ಲಿ ಅವರಿಂದ ಉಪನ್ಯಾಸ ನೆರವೇರಲಿದೆ. ಸಂಜೆ 7.30ಕ್ಕೆ ಪದ್ಮಶ್ರೀ ಪಂ.ಎಂ. ವೆಂಕಟೇಶಕುಮಾರ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ ಎಂದರು.
ಅ. 12ರಂದು ಬೆಳಗ್ಗೆ 8.30ಕ್ಕೆ ದೇಶಪಾಂಡೆ ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಚಕ್ರಾಬ್ಜ ಮಂಡಲ ಮಹಾಪೂಜೆ, ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ರವರೆಗೆ ವಿದ್ವಾನ್ ನರಸಿಂಹಾಚಾರ್ಯ ಕೊರ್ಲಹಳ್ಳಿ, ಡಾ.ಎಚ್. ಸತ್ಯನಾರಾಯಣಾಚಾರ್ಯ, ವಾದಿರಾಜಾಚಾರ್ಯ, ಪ್ರದ್ಯುಮ್ನಾಚಾರ್ಯ ಜೋಶಿ, ಹರಿ ಆಚಾರ್ಯ ವಾಳ್ವೇಕರ್ ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ ಎಂದರು.
ಮಧ್ಯಾಹ್ನ 12ಕ್ಕೆ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳ ತುಲಾಭಾರ, ನಂತರ ಅನುಗ್ರಹ ಸಂದೇಶ ನೀಡುವರು. ಬಳಿಕ ಸವಾಯಿ ಗಂಧರ್ವ ಸಭಾಂಗಣದಲ್ಲಿ ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಎ. ಹರಿದಾಸಭಟ್, ಡಾ. ಆನಂದತೀರ್ಥಾಚಾರ್ಯ ನಾಗಸಂಪಿಗೆ, ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಗೋಪಿನಾಥಾಚಾರ್ಯ ಗಲಗಲಿ, ವೆಂಕಟನರಸಿಂಹಾಚಾರ್ಯ ಜೋಶಿ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ಅಂದು ಸಂಜೆ 5ಕ್ಕೆ ಶ್ರೀಗಳ ಭವ್ಯ ಶೋಭಾಯಾತ್ರೆ ನಡೆಯಲಿದೆ. ಬಳಿಕ ಸವಾಯಿ ಗಂಧರ್ವ ಸಭಾಂಗಣದಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಸಂಶಿ, ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ, ಪಾವಗಡ ರಾಮಕೃಷ್ಣಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್, ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಚಿತ್ರದುರ್ಗ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರ, ಇಸ್ಕಾನ್ ಅಧ್ಯಕ್ಷ ರಾಜೀವಲೋಚನದಾಸ ಅವರಿಂದ ಸಂತ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು.
ಮಹಾಮಂಡಳದ ಕಾರ್ಯದರ್ಶಿ ಅನಂತರಾಜ ಭಟ್, ಕೃಷ್ಣ ಕೆಮ್ತೂರ, ಗುರುರಾಜ ಬಾಗಲಕೋಟೆ, ಅರುಣ ಉರಣಕರ್ ಸುದ್ದಿಗೋಷ್ಠಿಯಲ್ಲಿದ್ದರು.