ಜಿಲ್ಲೆ

ಬಂಡೆಯಲ್ಲಿ ನೆಲೆಗೊಂಡ ಶ್ರೀ ಬಿದ್ದಕಲ್ಲಪ್ಪ

ತರೀಕೆರೆ: ಪೂರ್ವಿಕರ ಕಾಲದಿಂದಲೂ ಮುಂಡ್ರೆ ಅರಣ್ಯ ಪ್ರದೇಶದ ಬೆಟ್ಟದ ತಪ್ಪಲಿನಲ್ಲಿ ಪೂರ್ವಾಭಿಮುಖವಾಗಿ ನೆಲೆಗೊಂಡಿರುವ ಶ್ರೀಬಿದ್ದಕಲ್ಲಪ್ಪಸ್ವಾಮಿ ತನ್ನ ನಂಬಿ ಬರುವ ಭಕ್ತರ ಇಷ್ಟಾರ್ಥ ಈಡೇರಿಸುವ ಜತೆಗೆ ಹತ್ತಾರು ಗ್ರಾಮಗಳ ಗೋವುಗಳಿಗೆ ರಕ್ಷಣೆ ನೀಡುತ್ತಿದ್ದಾನೆ.

ಶತಮಾನಗಳಿಂದ ಕಾನನದ ನಡುವಿನ ಬಂಡೆಯಲ್ಲಿ ಮಳೆ, ಗಾಳಿ, ಬಿಸಿಲಿಗೆ ಮೈ ವೊಡ್ಡಿ ಕಲ್ಲಿನ ಆಕಾರದಲ್ಲಿ ಸ್ಥಿರವಾಗಿದ್ದ ಶ್ರೀ ಬಿದ್ದಕಲ್ಲಪ್ಪ ಸ್ವಾಮಿ ದೇವರಿಗೆ ಹತ್ತಾರು ಹಳ್ಳಿಯ ಭಕ್ತರು ಜತೆಗೂಡಿ ಗುಡಿ ನಿರ್ಮಿಸಲು ಮಾಡಿದ ಸಂಕಲ್ಪ ಸಾಕಾರಗೊಂಡಿದೆ. ಭಕ್ತರು ಶ್ರಮವಹಿಸಿ ಒಂದು ಕೋಟಿ ರೂ. ಹೆಚ್ಚು ವೆಚ್ಚದಲ್ಲಿ ನಿರ್ಮಿಸಿರುವ ದೇವಾಲಯ ಪ್ರವೇಶಕ್ಕೆ ಮೇ.1,2 ರಂದು ಮಹೂರ್ತ ನಿಗದಿಯಾಗಿದೆ.

ನೂತನ ದೇಗುಲದಲ್ಲಿ ಮೇ.1 ರಂದು ಸಂಜೆ 6ಕ್ಕೆ ಪುಣ್ಯಾಹ, ನಾಂದಿ, ರಕ್ಷೋಘ್ನ ಹೋಮ, ಪ್ರಥಮ ಕಳಸ ಪೂಜೆ ನಡೆಯಲಿದೆ. 2ರಂದು ಬೆಳಗ್ಗೆ 4ರಿಂದ 5 ಗಂಟೆಗೆ ಗಂಗಾಪೂಜೆ, ದೇವಾಲಯ ಪ್ರವೇಶ, ಧ್ವಜಾರೋಹಣದ, ಪಂವಗವ್ಯ, ನವಗ್ರಹ, ಶ್ರೀಮೃತ್ಯುಂಜಯ ಹೋಮ ನಡೆಯಲಿದೆ. ಬೆಳಗ್ಗೆ 7 ರಿಂದ 8ರ ಅವಧಿಯಲ್ಲಿ ರಂಭಾಪುರಿ ಬೀರೂರು ಖಾಸಾ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಳಸಾರೋಹಣ, ಕುಂಬಾಭಿಷೇಕ, ಜಯಾದಿ ಪ್ರಾಯಶ್ಚಿತ್ತ ಹೋಮ, ಪೂರ್ಣಾಹುತಿ, ಬಲಿಹರಣ, ಅಷ್ಟೋತ್ತರ, ಮಹಾಮಂಗಳಾರತಿ, ನಡೆಯಲಿದೆ.

ಬೆಳಗ್ಗೆ 11ರಿಂದ ಅರಸಿಕೆರೆ ಯಳನಾಡು ಮಹಾಸಂಸ್ಥಾನದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಕುಡ್ಲೂರು, ಕೊರಟಿಕೆರೆ, ಮುಂಡ್ರೆ, ಪುಂಡನಹಳ್ಳಿ, ದೊಡ್ಡಘಟ್ಟ, ಶಿವಪುರ, ಕೆ.ಗೊಲ್ಲರಹಳ್ಳಿ, ಕೆ.ಚಟ್ಟನಹಳ್ಳಿ, ಕೋರನಹಳ್ಳಿ ಹಾಗೂ ರಾಜೇನಹಳ್ಳಿಯ ಗ್ರಾಮಸ್ಥರು ಭಾಗವಹಿಸಲಿದ್ದಾರೆ.

ಶ್ರೀ ಸ್ವಾಮಿಯ ಸನ್ನಿಧಿಗೆ ಬರಲು ಕುಡ್ಲೂರು ಸಮೀಪದ ಹೋಗಿರುವ ರಾಷ್ಟ್ರೀಯ ಹೆದ್ದಾರಿಯಿಂದ 3.5 ಕಿ.ಮೀ ಸಾಗಿ ಬಲಕ್ಕೆ 2 ಕಿ.ಮೀ ದೂರದ ಮಣ್ಣಿನ ರಸ್ತೆ ಮೂಲಕ ಕ್ರಮಿಸಿದರೆ ಶ್ರೀಬಿದ್ದಕಲ್ಲಪ್ಪ ಸ್ವಾಮಿ ದೇಗುಲ ಸಿಗಲಿದೆ.