ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ 32ನೇ ವರ್ಷದ ಮಹಾಕುಂಭಾಭಿಷೇಕ ಮತ್ತು ಗುಗ್ಗಳ, ಅಗ್ನಿಕುಂಡ ಹಾಯುವ ಕಾರ್ಯಗಳು ಗುರುವಾರ ವಿಜೃಂಭಣೆಯಿಂದ ಜರುಗಿದವು.
ಸಂಪ್ರದಾಯದಂತೆ ಬೆಳಗ್ಗೆ ಸ್ವಾಮಿ ಮೂರ್ತಿಗೆ ಮಹಾರುದ್ರಾಭಿಷೇಕ ಸೇರಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರ ಮನೆಗಳಿಗೆ ತೆರಳಿ ಪುರವಂತರೊಂದಿಗೆ ವೀರಭದ್ರೇಶ್ವರ ದೇವರನ್ನು ಮೆರವಣಿಗೆ ಮೂಲಕ ದೇಗುಲಕ್ಕೆ ತರಲಾಯಿತು. ದೇಗುಲದ ಆವರಣದಿಂದ ಗುಗ್ಗಳದ ಕೊಡಗಳನ್ನು ಹೊತ್ತ ಭಕ್ತರು ವೀರಭದ್ರ ಕುಣಿತ, ಸಮಾಳ ಇತರ ಜನಪದ ಕಲಾವಾದ್ಯಗಳೊಂದಿಗೆ ಹೆಜ್ಜೆ ಹಾಕುತ್ತ ಶ್ರೀಕಲ್ಲೇಶ್ವರ ದೇವಸ್ಥಾನ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೈನವಿರೇಳಿಸಿದ ಶಸ್ತ್ರಧಾರಿಗಳು, ಪುರವಂತರು: ಗುಗ್ಗಳದ ಅಂಗವಾಗಿ ಸ್ವಾಮಿಯ ಭಕ್ತರು ಶಸ್ತ್ರಗಳನ್ನು ಹಾಕಿಸಿಕೊಂಡು ವಾದ್ಯಗಳ ಮೇಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ, ಅಗ್ನಿಕುಂಡ ಹಾಯ್ದು ಭಕ್ತರು ಭಕ್ತಿ ಪರಾಕಾಷ್ಠೆ ಮೆರೆದರು. ಪುರವಂತರು ವೀರಭದ್ರೇಶ್ವರ ಸ್ವಾಮಿಯ ಬಗ್ಗೆ ವಿವಿಧ ಪೌರಾಣಿಕ ಒಡಪುಗಳ ಮೂಲಕ ಕೈಯಲ್ಲಿ ಖಡ್ಗ ಹಿಡಿದು ಝಳಪಿಸುತ್ತ ಪುರವಂತಿಕೆ ಕಲೆ ಪ್ರದರ್ಶಿಸಿ ಜನರನ್ನು ಬೆರಗುಗೊಳಿಸಿದರು. ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಿದ ಹಲವರನ್ನು ಸನ್ಮಾನಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ದೇವಸ್ಥಾನ ಕಮಿಟಿ ಅಧ್ಯಕ್ಷ ಉಮಚಗಿ ಚಿದಾನಂದಪ್ಪ, ಪ್ರಮುಖರಾದ ಸಿ.ರಾಚಪ್ಪ, ಮಾಲವಿ ವೀರಣ್ಣ, ಸಪ್ಪರದ ಜಂಬಣ್ಣ, ಗದ್ದಿಕೇರಿ ವೀರಣ್ಣ, ಹಡಪದ ಕೊಟ್ರೇಶ್, ಬಣಕಾರ ಕೊಟ್ರೇಶ್, ಬಾಳೆಕಾಯಿ ವೀರೇಶ್, ಉಮಚಗಿ ಬಸವರಾಜ್ ಇತರರಿದ್ದರು.