ಜಿಲ್ಲೆ

ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆ ಕಾರ್ಯದ ಆಶಾಕಿರಣ ಶ್ರೀ ಶ್ರೀ ರವಿಶಂಕರ್​​ ಗುರೂಜಿ

ಲೇಖಕರು: ರುಚಿರ ರಾಯ್​​

ಹಿಂಸಾಚಾರದ ತೀವ್ರತೆಯಿಂದಾಗಿ ಸಂಘರ್ಷಗಳಿಂದ ಉಂಟಾಗುವ ಸಾವು-ನೋವಿನ ಪ್ರಮಾಣದಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಅಧ್ಯಯನಗಳು ತಿಳಿಸಿವೆ. ಭಾರತದಲ್ಲಿ ಉಗ್ರಗಾಮಿಗಳು ಮತ್ತು ಮೂಲಭೂತವಾದಿಗಳಿಂದ ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹಾಳುಗೆಡುವುದು ನಡೆಯುತ್ತಲೇ ಇದೆ. ಶಸ್ತ್ರಾಸ್ತ್ರಗಳ ಸಂಗ್ರಹಣೆಯಲ್ಲಿ ದೇಶಗಳು ನಾ ಮುಂದು ತಾ ಮುಂದು ಎಂದು ಮುಂದುವರಿಯುತ್ತಿರುವ ಈ ಸಮಯದಲ್ಲಿ ಹಿಂಸಾಚಾರದ ನಿರ್ಮೂಲನೆಗೆ ಪರ್ಯಾಯ ಮಾರ್ಗ ಆಲೋಚಿಸುವುದು ಪ್ರಾಮುಖ್ಯವೆನಿಸಿದೆ. ಈ ನಿಟ್ಟಿನಲ್ಲಿ ಜಾಗತಿಕ ಮಾನವತಾವಾದಿ ಹಾಗೂ ನಮ್ಮ ಕರ್ನಾಟಕದ ಹೆಮ್ಮೆಯ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ವಿಶ್ವ ಶಾಂತಿ, ಸಂಘರ್ಷ ಪರಿಹಾರ ಮತ್ತು ನಿಶ್ಯಸ್ತ್ರೀಕರಣದ ಪರವಾಗಿ ಧ್ವನಿ ಎತ್ತಿದವರಲ್ಲಿ ಪ್ರಮುಖರಾಗಿದ್ದಾರೆ.

ಒತ್ತಡ-ಮುಕ್ತ, ಹಿಂಸಾ-ಮುಕ್ತ ಮತ್ತು ಆರೋಗ್ಯಕರ ಸಮಾಜವನ್ನು ಸೃಷ್ಟಿಸುವ ಉದ್ದೇಶದಿಂದ, ಗುರುದೇವರು ಸುಮಾರು 180 ದೇಶದ 500 ದಶಲಕ್ಷ ಜನರಿಗೆ ಆಂತರಿಕ ಶಾಂತಿ ಮತ್ತು ಸಂತೋಷವನ್ನು ಕಂಡುಕೊಳ್ಳಲು ಪ್ರೇರೇಪಿಸಿದ್ದಾರೆ. ಸಂಘರ್ಷಿತ ಪಕ್ಷಗಳ ನಡುವೆ ಸಂವಾದಕ್ಕೆ ಅವಕಾಶಗಳನ್ನು ಕಲ್ಪಿಸಿ, ಅವುಗಳ ಮಧ್ಯಸ್ಥಿಕೆ ವಹಿಸುವುದರ ಜತೆಗೆ ಆಂತರಿಕ ಮತ್ತು ಬಾಹ್ಯ ಶಾಂತಿಯನ್ನು ವೃದ್ಧಿಸುವ ಪ್ರಬಲ ಸಾಧನವಾದ ಧ್ಯಾನವನ್ನು ಮಾಡಿಸುವುದು ಅವರ ವಿಶೇಷತೆಯಾಗಿದೆ.

ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಈಶಾನ್ಯ ರಾಜ್ಯಗಳ, ವಿವಿಧ ಸಿದ್ಧಾಂತಗಳಿಗೆ ಸೇರಿದ ಸುಮಾರು 67 ಉಗ್ರಗಾಮಿ/ನಕ್ಸಲ್ ಗುಂಪುಗಳ ಸದಸ್ಯದರನ್ನು ಒಂದೆಡೆ ಸೇರಿಸಿ, ಆ ಪ್ರದೇಶದಲ್ಲಿನ ಸಮಸ್ಯೆ ಚರ್ಚಿಸಲು ಮತ್ತು ಅಲ್ಲಿ ಶಾಂತಿ ಸ್ಥಾಪಿಸಲು ಕ್ರಮಬದ್ಧವಾದ ಮಾರ್ಗಗಳನ್ನು ಕಂಡುಕೊಳ್ಳಲು ಅವರಿಗೆ ವೇದಿಕೆಯನ್ನು ಕಲ್ಪಿಸುವ ಸಲುವಾಗಿ ಆಯೋಜಿಸಿದ್ದ ಸಮ್ಮೇಳನದಲ್ಲಿ, ಗುರುದೇವರು ತಮ್ಮ ಭಾಷಣದಲ್ಲಿ ಕೊನೆಯ ಬಂದೂಕನ್ನು ಕೆಳಗಿಡುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದರು.

ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರ ಜತೆಗಿನ ದಶಕದ ಸುದೀರ್ಘ ಒಡನಾಟದ ನಂತರ 68 ನಕ್ಸಲೀಯರು ಅಧಿಕಾರಿಗಳ ಸಮ್ಮುಖದಲ್ಲಿ ಶರಣರಾದರು. ನನ್ನ ಕೋಪವು ನಗುವಾಗಿ ಮಾರ್ಪಟ್ಟಿದೆ. ಮೊದಲು ಸಾಮಾನ್ಯ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟಕರವಾಗಿತ್ತು. ಆದರೆ ಈಗ ಶಾಂತಿಯುತ ಜೀವನವನ್ನು ನಡೆಸುತ್ತಿದ್ದೇನೆ ಎಂದು ಶರಣಾದ ಉಗ್ರಗಾಮಿಗಳಲ್ಲಿ ಒಬ್ಬರು ಹೇಳಿದರು.

500 ವರ್ಷಗಳಷ್ಟು ಹಳೆಯ ಅಯೋಧ್ಯೆ ರಾಮಮಂದಿರ ವಿವಾದವನ್ನು ಪರಿಹರಿಸುವಲ್ಲಿ ಗುರುದೇವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಪ್ರಯತ್ನಗಳು ಹಲವು ವರ್ಷಗಳ ಹಿಂದೆಯೇ ಸಮಸ್ಯೆಯ ಭಾಗವಾದ ಎಲ್ಲಾ ವರ್ಗದವರೊಂದಿಗೆ ಶಾಂತಿಯುತವಾದ ಸಂವಾದ ಮತ್ತು ಮಾತುಕತೆಯನ್ನು ನಡೆಸುವ ಮೂಲಕ ನಿರಂತರವಾಗಿ ನಡೆದಿದ್ದವು. ಅಡೆತಡೆಗಳನ್ನು ಮೀರಿ ಪಕ್ಷಗಳ ನಡುವೆ ವಿಶ್ವಾಸ ಬೆಳೆಸುವಲ್ಲಿ ಸಹಾಯವಾಗುವಂತಹ ಸಂವಾದಗಳನ್ನು ನಡೆಸಿದ್ದರು. ಹಿಂದುಗಳ ಆಕಾಂಕ್ಷೆಗಳು ಮತ್ತು ಮುಸ್ಲಿಂ ಸಮುದಾಯದ ಭಾವನೆಗಳನ್ನು ಗೌರವಿಸುವ ಒಮ್ಮತವನ್ನು ತಲುಪುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಗಾಂಧಿ ತತ್ವವಾದ ಅಹಿಂಸೆಯ ಮಾರ್ಗವನ್ನು ಗುರುದೇವರು ಮನವರಿಕೆ ಮಾಡಿಸಿದ ಬಳಿಕ ಕೊಲಂಬಿಯಾದ ಬಂಡಾಯ ಗುಂಪಾದ ಎಫ್​ಎಆರ್​ಸಿ ನಾಯಕರು ಅಹಿಂಸಾ ತತ್ವವನ್ನು ಅನುಸರಿಸುವುದಾಗಿ ಹೇಳಿದರು. 2008ರಲ್ಲಿ ಮಧ್ಯಪ್ರಾಚ್ಯದಲ್ಲಿ ಗುರುದೇವರು ಇರಾಕ್ ಸಂಘರ್ಷದ ಎಲ್ಲಾ ಸಮುದಾಯದ (ಶಿಯಾ, ಸುನ್ನಿ ಮತ್ತು ಕುರ್ದಿಗಳು) ನಾಯಕರನ್ನು ಭೇಟಿಯಾಗಿದ್ದರು. ಅಲ್ಲದೆ ಸಾವಿರಾರು ಯುದ್ಧ ಪೀಡಿತ ಜನರಿಗೆ ಮತ್ತು ಯುವಕರಿಗೆ ಪರಿಹಾರ ಮತ್ತು ನಿವಾರಣಾ ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ಕೇವಲ ಹೊರಗಿನ ಸಂಘರ್ಷಗಳನ್ನು ಪರಿಹರಿಸುವಲ್ಲಿ ಮಾತ್ರವಲ್ಲದೇ ಮನುಷ್ಯನ ಆಂತರ್ಯದಲ್ಲಿನ ಘರ್ಷಣೆಗಳನ್ನು ಪರಿಹರಿಸುವ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಕೈದಿಗಳ ಸುಧಾರಣೆಯಲ್ಲಿ ಅವರ ಕೊಡುಗೆ ಅಪಾರವಿದೆ. ಗುರುದೇವರ ಹಲವು ಪ್ರಬಲವಾದ ಪ್ರಕ್ರಿಯೆಗಳ ಸಹಾಯದಿಂದ 8,00,000ಕ್ಕೂ ಹೆಚ್ಚು ಕೈದಿಗಳು, ತಮ್ಮ ಭಾವನೆಗಳ ಮೇಲೆ ಹತೋಟಿ ಸಾಧಿಸಿ ಆಂತರಿಕ ಶಾಂತಿ ಅನುಭವಿಸದ್ದಾರೆ.

ಭಾರತದಲ್ಲಿ 70 ನದಿಗಳು ಮತ್ತು ಉಪನದಿಗಳ ಪುನರುಜ್ಜೀವನದಂತಹ ಹಲವು ಸೇವಾ ಉಪಕ್ರಮಗಳನ್ನು ಪ್ರೇರಿಪಿಸಿದ್ದಾರೆ. ದೇಶದಲ್ಲಿನ ಅಂತರ್ಜಲ ವೃದ್ಧಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ.

ಗುರುದೇವರ ಮಾರ್ಗದರ್ಶನದಲ್ಲಿ ಸುಮಾರು 100,000 ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ 1262 ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಪ್ರಪಂಚದಾದ್ಯಂತ ಈವರೆಗೆ 81.2 ಮಿಲಿಯನ್ ಮರಗಳನ್ನು ನೆಡಲಾಗಿದೆ. ಸುಮಾರು 2.2 ದಶ ಲಕ್ಷ ರೈತರಿಗೆ ನೈಸರ್ಗಿಕ ಕೃಷಿ, ಕಡಿಮೆ ವೆಚ್ಚದ, ಆರೋಗ್ಯಕರ, ಸುಸ್ಥಿರ, ಮತ್ತು ಲಾಭದಾಯಕ ಕೃಷಿ ವಿಧಾನಗಳಲ್ಲಿ ತರಬೇತಿ ನೀಡುವ ಮೂಲಕ ಮತ್ತು ಇಂಗು ಬಾವಿಗಳ ನಿರ್ಮಾಣದ ಮೂಲಕ ಅವರಿಗೆ ಹೆಚ್ಚಿನ ನೀರು ಲಭ್ಯವಾಗುವಂತೆ ಮಾಡುವುದರೊಂದಿಗೆ ಗುರುದೇವರು ಭಾರತೀಯ ರೈತ ಸಮುದಾಯವನ್ನು ಸಮಗ್ರವಾಗಿ ಬೆಂಬಲಿಸಿದ್ದಾರೆ.