ಶ್ರೀರಂಗಪಟ್ಟಣ : ಪಟ್ಟಣದಲ್ಲಿ ಏ.30ರಿಂದ ಮೇ 4ರವರೆಗೆ ಬಾಲಕಿಯರ ರಾಷ್ಟ್ರೀಯ ಮಟ್ಟದ ಹ್ಯಾಂಡ್‌ಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಡಾ.ಆರ್. ರಾಘವೇಂದ್ರ ಹೇಳಿದರು.
ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಷನ್ ಮತ್ತು ವಿವಿಧ ಸಾಮಾಜಿಕ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಶನಿವಾರ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ತಾಲೂಕು ಕ್ರೀಡಾಂಗಣದಲ್ಲಿ ಇದೇ ಪ್ರಪ್ರಥಮ ಬಾರಿಗೆ 15 ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಮಟ್ಟದ ಹ್ಯಾಂಡ್‌ಬಾಲ್ ಕ್ರೀಡಾಕೂಟ ಆಯೋಜಿಸಲಾಗಿದೆ. 5 ದಿನಗಳ ಪಂದ್ಯಾವಳಿಗೆ ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ದೇಶದ ವಿವಿಧೆಡೆಯಿಂದ ನುರಿತ ತರಬೇತು ದಾರರು ಹಾಗೂ ತೀರ್ಪುಗಾರರು ಆಗಮಿಸಲಿದ್ದಾರೆ. ಊಟ, ವಸತಿ, ವೈದ್ಯಕೀಯ ಸೇರಿದಂತೆ ಮೂಲಸೌಕರ್ಯ ಮತ್ತು ಭದ್ರತೆ ಕಲ್ಪಿಸಲಾಗಿದೆ ಎಂದರು. ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಮಂಜುರಾಮ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಿಂದ 600ಕ್ಕೂ ಹೆಚ್ಚು ಹ್ಯಾಂಡ್‌ಬಾಲ್ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಇವರಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲೂ ಭಾಗವಹಿಸಿದವರೂ ಇದ್ದಾರೆ ಎಂಬುದು ಹೆಮ್ಮೆ ಎಂದರು. ಪಂದ್ಯಾವಳಿ ಸಮಿತಿ ಸದಸ್ಯ ಚಂದಗಾಲು ನಾಗೇಂದ್ರ, ಉದ್ಯೋಗದಾತ ಸಂಸ್ಥೆ ಅಧ್ಯಕ್ಷ ರುಕ್ಮಾಂಗದ ಇತರರು ಉಪಸ್ಥಿತರಿದ್ದರು.