ಹೊಸಕೋಟೆ: ಕೋಟೂರಿನ ಪರಿಶಿಷ್ಟ ವರ್ಗದ ಕಾಲನಿಯಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವ ಜನರು ಹಾಗೂ ಖಾಸಗಿ ವ್ಯಕ್ತಿ ನಡುವಿನ ಜಾಗದ ವಿವಾದದ ಬಗ್ಗೆ ಎಸಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಶರತ್ಬಚ್ಚೇಗೌಡ ತಿಳಿಸಿದರು.
ಕೋಟೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಕೆಲ ವರ್ಷಗಳ ಹಿಂದೆ ಸರ್ಕಾರ ಗ್ರಾಮಸ್ಥರಿಗೆ ನಿವೇಶನದ ಹಕ್ಕು ಪತ್ರ ನೀಡಿದೆ, ಆ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ನಂತರ ವ್ಯಕ್ತಿಯೊಬ್ಬರು ಈ ಜಾಗ ನನ್ನದು, ಪಹಣಿಯಲ್ಲಿ ನಮ್ಮ ವಂಶಸ್ಥರ ಹೆಸರು ಬರುತ್ತಿದ್ದು, ಮನೆ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಸ್ಥಳಿಯರ ಅಹವಾಲಿಗೆ ಶಾಸಕರು ಪ್ರತಿಕ್ರಿಯಿಸಿದರು. ಮೂಲ ಜಮೀನು ಮಾಲೀಕರು ಎಸಿ ನ್ಯಾಯಾಲಯದಲ್ಲಿ ದಾವೆ ಹೂಡಿ ಪರಿಹಾರಕ್ಕೆ ಒತ್ತಾಯಿಸುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಬಂದಿದೆ. ಆದರೆ, ಗ್ರಾಮಸ್ಥರು ಹಕ್ಕು ಪತ್ರ ದೊರೆತ ನಂತರವಷ್ಟೇ ಮನೆ ನಿರ್ಮಾಣ ಮಾಡಿಕೊಂಡಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾವ ಭಾಗದಲ್ಲಿ ಸಮಸ್ಯೆ ಆಗಿದೆ ಎಂಬುದರ ಬಗ್ಗೆ ಎಸಿ ಜತೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.
ಅರ್ಹರಿಗೆ ನಿವೇಶನ ಹಂಚಿಕೆ : ಗ್ರಾಮದಲ್ಲಿ ಕೆಲವರಿಗೆ ಸರ್ಕಾರ ನಿವೇಶನ ನೀಡಿದ್ದು, ಗ್ರಾಮದಲ್ಲಿ ಇನ್ನೂ ಹೆಚ್ಚಿನ ಬಡವರಿದ್ದಾರೆ. ಅವರು ಸೂಕ್ತ ನಿವೇಶನಗಳಿಲ್ಲದೆ ಪರದಾಡುತ್ತಿದ್ದಾರೆ, ಅವರಿಗೂ ವಸತಿ ಯೋಜನೆಯಡಿ ನಿವೇಶನ ನೀಡಬೇಕು ಎಂದು ಇದೇ ವೇಳೆ ಹಲವರು ಒತ್ತಾಯಿಸಿದರು. ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ನೀಡುವ ಪ್ರಸ್ತಾವನೆ ಇದೆ, ಈ ಭಾಗದಲ್ಲಿ ಸರ್ಕಾರಿ ಜಮೀನು ಗುರುತಿಸುವಂತೆ ಕಂದಾಯ ಅಧಿಕಾರಿಗಳಿಗೆ ತಿಳಿಸಿದ್ದೇನೆ, ನಂತರ ಗ್ರಾಮ ಪಂಚಾಯಿತಿ ವತಿಯಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.