ಜಿಲ್ಲೆ

ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ

ತರೀಕೆರೆ: ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇಗುಲ ಪ್ರವೇಶದ್ವಾರದಲ್ಲಿ ಅನುಮತಿ ಇಲ್ಲದೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕು ಆಡಳಿತ ಶನಿವಾರ ಸ್ಥಳಾಂತರಿಸಲು ಮುಂದಾಗಿದೆ.

ಶುಕ್ರವಾರ ತಡರಾತ್ರಿ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ದೇಗುಲ ಪ್ರವೇಶದ್ವಾರದ ಮೂಲಕ ಗೋಪಾಲ, ಗೋಪಾಲ ಕಾಲನಿ, ಭೂಸೇನಹಳ್ಳಿ, ಸಿದ್ಲೀಪುರ ಇನ್ನಿತರ ಗ್ರಾಮಗಳಿಗೆ ಹಾದು ಹೋಗುವ ರಸ್ತೆ ನಡುವೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಇದರಿಂದ ಶನಿವಾರ ಬೆಳಗ್ಗೆ ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ವಣವಾಗಿತ್ತು. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ತಾಲೂಕು ಆಡಳಿತ ಪರಿಶೀಲನೆ ನಡೆಸಿ ತಾಲೂಕಿನ ದಲಿತ ಮುಖಂಡರನ್ನು ಘಟನಾ ಸ್ಥಳಕ್ಕೆ ಕರೆಯಿಸಿ ಸಮಾಲೋಚನೆ ನಡೆಸಿದರು. ಚರ್ಚೆ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು.

ನಂತರ ಒಮ್ಮತದ ತೀರ್ವನಕ್ಕೆ ಬಂದ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಪಿಒಪಿಯಿಂದ ನಿರ್ವಿುಸಿರುವ 12 ಅಡಿ ಎತ್ತರದ ಬಾಬಾ ಸಾಹೇಬರ ಪ್ರತಿಮೆಗೆ ಧಕ್ಕೆ ಉಂಟಾಗದಂತೆ ತೆರವುಗೊಳಿಸಿ ಪ್ರವೇಶದ್ವಾರದ ಪಕ್ಕದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಮುಂದಾದರು. ಆದರೆ ಕಬ್ಬಿಣದ ಸ್ಟ್ಯಾಂಡ್​ಗೆ ಬಿಗಿಯಾಗಿ ಅಳವಡಿಸಿದ್ದರಿಂದ ಪ್ರತಿಮೆ ಬೇರ್ಪಡಿಸಲು ಹರಸಾಹಸ ಪಡುವಂತಾಗಿದೆ.