ಶ್ರೀರಂಗಪಟ್ಟಣ : ಸಮಗ್ರ ಕೃಷಿಯಿಂದ ಅನ್ನದಾತರ ಬದುಕು ಸುಧಾರಣೆ ಕಾಣಬೇಕು ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ
ಹೇಳಿದರು. ಪಟ್ಟಣದ ರೇಷ್ಮೆ ಇಲಾಖೆ ಆವರಣದಲ್ಲಿ ಸೋಮವಾರ ರೈತ ಫಲಾನುಭವಿಗಳಿಗೆ ರೇಷ್ಮೆ ಕೃಷಿಗೆ ಪೂರಕವಾಗುವ ಪ್ಲಾಸ್ಟಿಕ್ ಚಂದ್ರಿಕೆ, ಔಷಧ ಸಿಂಪಡಣೆ ಸಾಧನ, ಕ್ರಿಮಿ-ಕೀಟ ನಿಯಂತ್ರಕ ಪೌಡರ್‌ಗಳನ್ನು ವಿತರಿಸಿ ಮಾತನಾಡಿದರು. ಕ್ಷೇತ್ರದ ರೈತರು ರೇಷ್ಮೆ ಬೆಳೆಗೆ ಒತ್ತು ನೀಡಬೇಕು. ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ನೆರವಾಗಬೇಕು ಎಂದು ಸಲಹೆ ನೀಡಿದರು. ತಾಲೂಕಿನಲ್ಲಿ ಕಬ್ಬು, ಭತ್ತ ಹಾಗೂ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳಿಗೆ ವ್ಯವಸಾಯಗಾರರು ಒಗ್ಗಿಕೊಂಡಿದ್ದಾರೆ. ವಾತಾವರಣದ ಏರು ಪೇರುಗಳಿಂದ ಕೃಷಿ ಬದುಕು ಕೆಲ ಬಾರಿ ಡೋಲಾಯಮಾನವಾಗುತ್ತದೆ.
ಹಾಗಾಗಿ ಸಮಗ್ರ ಕೃಷಿ, ಪಶು ಸಂಗೋಪನೆ ಮತ್ತು ರೇಷ್ಮೆ ಕೃಷಿಗೂ ಆದ್ಯತೆ ನೀಡಬೇಕು. ರೇಷ್ಮೆಗೆ ಸಾಕಷ್ಟು ಬೇಡಿಕೆ ಇದೆ. ಇದು ಅಧಿಕ ಲಾಭ ತರುವ ಬೆಳೆ. ಇದರಿಂದ ರೈತಾಪಿ ಕುಟುಂಬಗಳು ಸುಧಾರಿತ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು. ರೇಷ್ಮೆ ಇಲಾಖೆ ಅಧಿಕಾರಿಗಳು ರೈತರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ಮಾಹಿತಿ ನೀಡಿ ರೇಷ್ಮೆ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವಿವಿಧ ಅನುದಾನ ಜಾರಿಗೊಳಿಸಿ ನೆರವಾಗಬೇಕು ಎಂದು ಸೂಚಿಸಿದರು. ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ತಾಲೂಕು ಪಂಚಾಯಿತಿ ಇಒ ವೇಣು, ಸಹಾಯಕ ಕೃಷಿ ನಿರ್ದೇಶಕಿ ಪ್ರಿಯದರ್ಶಿನಿ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.